Skip to main content

ಲಿಂಗಾಯತ ನಿಜವಾಗಿಯೂ ಸ್ವತಂತ್ರ ಧರ್ಮವೇ?


Image result for basavanna

ಬಿಟ್ಟೆನೆಂದರೂ ಬಿಡದೀ ಮಾಯೇ ಎಂಬಂತೆ ರಿಲಿಜನ್ಗಳ ಕುರಿತಾದ ಚರ್ಚೆಗಳು, ಅದರ ಕುರಿತಾದ ಜಿಜ್ಞಾಸೆಗಳು ನಿತ್ಯ ಮತ್ತು ನಿರಂತರ. ವಿಶ್ವ ಮಾನವರಾಗುವುದು ಸೈದ್ದಾಂತಿಕವಾಗಿ ಸರಿಯಾದರೂ ಪ್ರಾಯೋಗಿಕವಾಗಿ ಅಥವಾ ವಾಸ್ತವಿಕವಾಗಿ ಯಶಸ್ವಿಯಾಗಲಾರದು. ಜನಸಾಮಾನ್ಯರಿಗೆ  ವಿಶ್ವ ಮಾನವತ್ವವನ್ನು ಭೋಧಿಸಲೂ ಕೂಡ ಒಂದು ಸರಳ ಆಚರಣೆಯ ಸಿದ್ಧ ಮಾದರಿಯೊಂದು ಬೇಕೆ ಬೇಕು. ಧರ್ಮಗಳಿಂದಾಗುವ ಅತಿರೇಕ ಮತ್ತು ಅಮಲುಗಳನ್ನು ಅರಿತ ಕಾರ್ಲಮಾರ್ಕ್ಸ 'ರಿಲಿಜನ್ ಒಂದು ಅಫೀಮು' ಎಂಬ ತೀರ್ಮಾನಕ್ಕೆ ಬಂದಿದ್ದ. ಆದರೂ ರಿಲಿಜನ್ ಎಂಬುದು ಸಾಮಾಜಿಕ ಜೀವನದ ಬಹುಮುಖ್ಯ ಘಟಕವೇ ಆಗಿರುತ್ತದೆ. ಅದು ಸಾಮಾಜಿಕ ನಿಯಂತ್ರಣದ ನಿಯೋಗವಲ್ಲದೇ ಸಾಮಾಜೀಕರಣದ ನಿಯೋಗವೂ ಹೌದು.ರಿಲೀಜನ್ ಒಬ್ಬ ವ್ಯಕ್ತಿಗೆ ಸಾಮಾಜಿಕ ಗುರುತನ್ನು, ಸಾಮುದಾಯಿಕ ಭಾವನೆಯನ್ನು, ಸಾಮಾಜಿಕ ಸುರಕ್ಷತೆ /ಭದ್ರತೆಯನ್ನು ನೀಡುತ್ತದೆ ಇವುಗಳೊಂದಿಗೆ ವ್ಯಕ್ತಿಯನ್ನು ಸಾಮಾಜಿಕ ಜೀವನಕ್ಕೆ ಅಣಿಗೊಳಿಸುತ್ತದೆ. ವ್ಯಕ್ತಿಯ ಸಾಮಾಜಿಕ ಪರಿಸರವನ್ನಾಧರಿಸಿ ರಿಲೀಜನ್ ಜವಾಬ್ದಾರಿಗಳ ತೀವ್ರತೆಗಳು ಬದಲಾಗುತ್ತವೆ. ಉದಾಹರಣೆಗೆ ಪ್ರಾಥಮಿಕ ಸಂಬಂಧಗಳಿಗೆ ಬೆಲೆ ಕೊಡುವ ಗ್ರಾಮೀಣ ಸಮುದಾಯದಲ್ಲಿ ರಿಲೀಜನ್ನಿಗೆ ಅತ್ಯಂತ ಮಹತ್ವ ಕೊಡುತ್ತಿರಬಹುದು ಅದೇ ಪರಿಸರ ಮಾಧ್ಯಮಿಕ ಸಂಬಂಧಗಳಾಧಾರಿತ ಮೆಟ್ರೊ ಪಾಲಿಟಿನ್ ನಗರಗಳ ಒತ್ತಡದ ಜೀವನದಲ್ಲಿ ಇಲ್ಲದೇ ಇರಬಹುದು.

ರಿಲೀಜನ್ ಎಂಬ ಪರಿಕಲ್ಪನೆ ಭಾರತ ಮೂಲದ್ದಲ್ಲದಿರಬಹುದಾದರೂ ಹೆಚ್ಚೂ ಕಡಿಮೆ ಅದೇ ಅರ್ಥ ಕೊಡುವ 'ಧರ್ಮ' ಎಂಬ ಕಲ್ಪನೆ  ಭಾರತದಲ್ಲಿದೆ. ಧರ್ಮ ಎಂಬುದನ್ನು ' ಧಾರ್ಮಿಕ ಆಚರಣೆಗಳ ವ್ಯವಸ್ಥೆ' ಎಂದು ಸೀಮಿತಗೊಳಿಸಿ, 'ಜೀವನ ವಿಧಾನ' ಎಂದು ವೈಶಾಲೀಕರಿಸಬಹುದು. ಒಂದು ಧಾರ್ಮಿಕ ಜೀವನ ಪದ್ಧತಿ ರಿಲೀಜನ್ ಎನಿಸಿಕೊಳ್ಳಬೇಕಾದರೆ ಕೆಲವು ಮೂಲಭೂತ ಮಾನದಂಡಗಳನ್ನು ನಾವೇ ನಿಗದಿಪಡಿಸಿಕೊಂಡಿದ್ದೇವೆ ಆದರೆ ಇದೇ ಅಂತಿಮ ಎಂದೂ ಹೇಳಲಾಗದು. ಜಗತ್ತಿನ ಬಹುತೇಕ ಧರ್ಮಗಳು ಕೆಳಗಿನ ಲಕ್ಷಣಗಳನ್ನು ಹೊಂದಿರುವುದನ್ನು ಕಾಣಬಹುದು:

1.ತನ್ನದೆಯಾದ ಹೆಸರು
2.ಆರಾಧ್ಯ ದೈವ
3.ಧರ್ಮಸ್ಥಾಪಕ /ಪ್ರವಾದಿ
4.ಧರ್ಮ ಗ್ರಂಥ
5.ಧಾರ್ಮಿಕ ಲಾಂಛನ/ಧ್ವಜ
6.ಧರ್ಮ ಕ್ಷೇತ್ರ
7.ಸಂಸ್ಕಾರ/ಸಂಸ್ಕೃತಿ /ಪರಂಪರೆ
8.ಸಿದ್ಧಾಂತ
9.ಸಮಾಜ/ನೀತಿ/ಅರ್ಥ /ದರ್ಶನ ಶಾಸ್ತ್ರ
10.ಸಾಧನೆ/ಧ್ಯೇಯ

ಒಬ್ಬನೇ ಪ್ರವಾದಿ ಭೋಧಿಸಿದ ಜೀವನ ಮಾರ್ಗ ಅಥವಾ ಹಲವು ಪ್ರವಾದಿಗಳು ಒಟ್ಟಾಗಿ ಭೋಧಿಸಿದ ಗೊತ್ತು ಗುರಿಯ ಒಂದೇ ಜೀವನಮಾರ್ಗವೇ ರಿಲೀಜನ್ ಅಂತ ಕರೆಯಬಹುದು. ಭಾರತದ ಸಂದರ್ಭದಲ್ಲಿ ನಾವಿವತ್ತು ಹಿಂದೂ ಧರ್ಮ ಅಂತ ಯಾವ ಧರ್ಮ ವನ್ನು ಕರೆಯುತ್ತಿದ್ದೆವೆಯೋ ಧರ್ಮಕ್ಕೆ ರಿಲೀಜನ್ನಿನ ಮಾನದಂಡಗಳನ್ನು ಅಳವಡಿಸುವುದು ಮೂರ್ಖತನದ ಕೆಲಸ ಮಾತ್ರವಲ್ಲದೇ "ಹಿಂದೂ ನಾವೆಲ್ಲ ಒಂದು" ಎಂಬ ಮಾತೂ ಕೂಡ. ಯಾಕೆಂದರೆ ಅದರ ಕ್ಲಿಷ್ಟಕರವಾದ ರಚನೆ. ಮೂಲತಃ ಹಿಂದೂ ಎಂಬ ಹೆಸರೇ ಧಾರ್ಮಿಕ ಸೂಚಕವಲ್ಲ. ಇದನ್ನು ಐತಿಹಾಸಿಕ ಸನಾತನ/ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಪರಿಗಣಿಸಿದರೂ ಹಲವು ಸಮಸ್ಯೆಗಳು ಉದ್ಭವಿಸದೆ ಇರಲಾರವು ಯಾಕೆಂದರೇ ವೈದಿಕ ಧರ್ಮದ  ಪರೀಧಿಗೆ ಒಳಪಡದ, ವೇದ ಮೂಲವನ್ನು ಒಪ್ಪದ ಜನರೇ ಬಹುಸಂಖ್ಯಾತರಿದ್ದು ಹಿಂದೂ ಎಂಬ ಪದದಡಿ ಅರಿವಿದ್ದೂ ಇಲ್ಲದೆಯೂ ಗುರುತಿಸಲ್ಪಟ್ಟಿದ್ದಾರೆ. ಹಾಗಾದರೇ ಸೋ ಕಾಲ್ಡ ಹಿಂದೂ ಧರ್ಮ ಎಂದರೆ ಏನು?

ಭಾರತೀಯ ಸಮಾಜವೇ?
ಭಾರತೀಯ ಸಂಸ್ಕೃತಿಯೇ?
ಕೇವಲ ವರ್ಣಾಶ್ರಮ ವ್ಯವಸ್ಥೆಯೇ?
ಸಾವಿರಾರು ಮೇಲು ಕೀಳುಗಳ ಜಾತಿ ವ್ಯವಸ್ಥೆಯೇ?

ಈಗಲೂ ಆಗಾಗ ನನ್ನ ಕಿವಿಗೆ ಬೀಳುವ 'ತಾವ್ಯಾವ್ ಮಂದ್ಯಾವ್ರೀ?  ಎಂಬ ಪ್ರಶ್ನೆಗಳಿಗೆ ಬರುವ ಉತ್ತರಗಳು ' ನಾನು ಹಿಂದೂ' ಎಂದಿರದೇ 'ನಾನು______ಜಾತಿಯವ' ನೆಂದೇ ಇರುತ್ತದೆ. ಅಲ್ಲಿಗೆ ಹಿಂದೂ ಧರ್ಮದವನೆಂದು ಆತನನ್ನು ಗುರುತಿಲ್ಪಟ್ಟಿರುವಲ್ಲೇನೋ ಅಪಸವ್ಯವಾಗಿದೆಯೆಂದೇ ಅರ್ಥ, ಅಲ್ಲಿಗೆ ಹಿಂದೂ ಎಂಬುದು ಧರ್ಮವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ  ಎಲ್ಲರನ್ನೂ ವೈದಿಕ/ಸನಾತನಿ ಧಾರ್ಮಿಕ ಪ್ರೇರಿತ ಹಿಂದೂ ಎಂಬ ಪರೀಧಿಯಲ್ಲಿ ಗುರುತಿಸುವುದರ ಬದಲು ಭಾರತೀಯ ಸಂಸ್ಕೃತಿ/ರಾಷ್ಟ್ರೀಯತೆ ಪ್ರೇರಿತ 'ಹಿಂದೂಸ್ತಾನಿ' ಎಂದು ಗುರುತಿಸುವುದೊಳಿತು.ಹಾಗಾದಾಗ ಅವೈದಿಕ ಭಾರತೀಯ ಧರ್ಮಗಳಾದ ಬೌದ್ಧ, ಜೈನ, ಲಿಂಗಾಯತ, ಸಿಖ್, ವಿದೇಶದಿಂದ ಬಂದ ಇಸ್ಲಾಂ, ಕ್ರಿಶ್ಚಿಯನ್, ಪಾರಸಿಗಳು ರಾಷ್ಟ್ರೀಯತೆ (nationality) ಪ್ರತಿನಿಧಿಸುವ 'ಹಿಂದೂಸ್ತಾನಿ'  ಪದದಡಿ ಗುರುತಿಸಿಕೊಳ್ಳಲು ಬರಬಹುದು.

ಭಾರತದ ಇತಹಾಸವನ್ನು ಅರಿತವನಿಗೆ ಭಾರತದ ಅಗಾಧ ವೈವಿಧ್ಯತೆಯ ಅರಿವಿದ್ದೇ ಇರುತ್ತದೆ. ಸೋ ಕಾಲ್ಡ  ಸನಾತನ ಹಿಂದೂ ಧರ್ಮದ ದೋಷಗಳ ಪರಿಣಾಮವಾಗಿ ಕ್ರಿಸ್ತ  ಪೂರ್ವ  4ನೇ ಶತಮಾನದಲ್ಲಿ ಗೌತಮ ಬುದ್ಧನಿಂದ 'ಬೌದ್ಧ ' , ಮಹಾವೀರನಿಂದ ' ಜೈನ',  12ನೇ ಶತಮಾನದಲ್ಲಿ  'ಲಿಂಗಾಯತ', ತದನಂತರ ಗುರು ನಾನಕ್ ರಿಂದ ಸಿಖ್ ಮತಗಳು ಉದಯವಾಗಿ ಭಾರತೀಯರಿಗೆ ಹೊಸ ಚೈತನ್ಯದಾಯಕ ಪ್ರಗತಿಪರ ವಿಚಾರಗಳನ್ನು ಪರಿಚಯಿಸಿದವು. ಬೌದ್ಧ ಮತ್ತು ಲಿಂಗಾಯತ ಧರ್ಮ ಪ್ರವಾದಿಗಳಂತೂ ಈಗಿನ ಭಾರತೀಯ ಸಂವಿಧಾನ  ಮತ್ತು ಪ್ರಜಾಪ್ರಭುತ್ವ  ವ್ಯವಸ್ಥೆಯ ಮೌಲ್ಯಗಳಿಗೆ ಪೂರಕವಾಗಬಲ್ಲ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಶಾಂತಿ, ಸಹಬಾಳ್ವೆ, ಸಾಮಾಜಿಕ ನ್ಯಾಯ, ಪ್ರೀತಿ, ಮಾನವೀಯತೆಗಳನ್ನೇ ಬೋಧಿಸಿದ್ದರು.
ಬುದ್ಧನಿಗಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟ ಬಸವಣ್ಣನವರು :

1.ಅನುಭವ ಮಂಟಪ ಎಂಬ ಪ್ರಜಾಪ್ರಭುತ್ವಾಧಾರಿತ ಸಂಸ್ಥೆ ಸ್ಥಾಪಿಸಿದರು.

2.ಕಾಯಕ-ದಾಸೋಹ ಎಂಬ ಆರ್ಥಿಕ ಸಿದ್ದಾಂತ ಮಂಡಿಸಿದರು. ಹಸಿದವರಿಗೆ ಅನ್ನ ನೀಡುವ ದಾಸೋಹ ಇಂದಿಗೂ ಕಾಣಬಹುದು.

3.ದಯವನ್ನೇ ಲಿಂಗಾಯತ ಧರ್ಮವನ್ನಾಗಿಸಿ ಸಮಾಜದ ದೀನ-ದಲಿತರನ್ನು ಒಳಗೊಂಡ ವರ್ಗ ಮತ್ತು ವರ್ಣರಹಿತ ಶರಣ ಸಮಾಜ ಕಟ್ಟಿದರು.

4.ಕಾಯಕವನ್ನೇ ಕೈಲಾಸವಾಗಿಸಿದರು, ಕಾಯಕದಲ್ಲಿ ನಿರತವಾಗಿರುವವನು ಇಷ್ಟಲಿಂಗ ಪೂಜಿಸದಿದ್ದರೂ ಆಯಿತೆಂದರು.

5.ಮನುಕುಲಕ್ಕೆ ಅತ್ಯಂತ ಸರಳ, ವೈಚಾರಿಕ ಧರ್ಮವನ್ನು ಕೊಡುಗೆಯಾಗಿ ನೀಡಿದರು.

6.ಸ್ಥಾವರ ರೂಪಿ ಗುಡಿ ಗುಂಡಾರಗಳನ್ನು ಶೋಷಣೆಯ ಕೇಂದ್ರಗಳೆಂದು ಜರಿದು ದೇವರ ಸಂಕೇತವಾಗಿ ಅತ್ಯಂತ ಸರಳ ವಿಶ್ವರೂಪಿ 'ಇಷ್ಟ ಲಿಂಗ'ವನ್ನು ಹುಟ್ಟು ಹಾಕಿದರು.

7.ಜನಸಾಮಾನ್ಯರ ಆಡುಭಾಷೆ ಕನ್ನಡವನ್ನೇ ದೇವಭಾಷೆಯನ್ನಾಗಿಸಿದರು.

8. ಶಿಕ್ಷಣವಂಚಿತ  ಸಮಾಜದ ಶೋಷಿತವರ್ಗದವರಲ್ಲಿ ಆತ್ಮವಿಶ್ವಾಸ ತುಂಬಿ, ಅಕ್ಷರಸ್ಥರನ್ನಾಗಿಸಿ ವಚನ ರಚನೆಯ ಚಳುವಳಿಯನ್ನೇ ಆರಂಭಿಸಿದರು.

9.ಅಂದಿನ ಜಡ್ಡುಗಟ್ಟಿದ ಗೊಡ್ಡು ಸಂಪ್ರದಾಯವಾದಿ ಸಮಾಜದಲ್ಲಿ ಅಂತರ್ಜಾತಿ ವಿವಾಹ ಮುಂದಾಗಿ ಮಾಡಿಸಿದರು.

10.ಜನಸಾಮಾನ್ಯರಿಗೆ ಅರ್ಥವಾಗದ, ಅವರಿಂದ ಬಹುದೂರವಿದ್ದ ವೇದ-ಆಗಮ-ತರ್ಕ-ಶಾಸ್ತ್ರಗಳೆಲ್ಲವನ್ನೂ ಏಕಕಾಲಕ್ಕೆ ತಿರಸ್ಕರಿಸಿದರು.

11. ಜನನ, ಮರಣ, ರಜ, ಕುಲ, ಎಂಜಲ, ಜಾತಕ, ವಾಸ್ತು, ಮುಹೂರ್ತ ಇತ್ಯಾದಿ ಎಲ್ಲ ಸೂತಕಗಳನ್ನು ಅಲ್ಲಗಳೆದರು.

12. ಅಂದಿನ ಸಮಾಜದ ದುರ್ಬಲ ವರ್ಗಗಳಾಗಿದ್ದ ದಲಿತ ಮತ್ತು ಸ್ತ್ರೀಯರಲ್ಲಿ ಆತ್ಮವಿಶ್ವಾಸ ಮೂಡಿಸಿದರಷ್ಟೇ ಅಲ್ಲ, ಸಮಾಜ ಸೂಳೆಯೆಂದು ಜರೆದ ಸಂಕವ್ವೆಯಂತವರಿಗೂ ಲಿಂಗದೀಕ್ಷೆ ನೀಡಿ ಹೊಸಬೆಳಕಾದರು.

13.ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ಲಿಂಗಾಯತ ಎಂಬ ಧರ್ಮ ಸ್ವೀಕಾರವನ್ನು ಲಿಂಗ, ಜಾತಿ, ಕುಲ, ಗೋತ್ರ, ವರ್ಣ, ವರ್ಗ, ಬೇಧವಿಲ್ಲದೇ ಲಿಂಗದೀಕ್ಷೆ ಎಂಬ ಅತ್ಯಂತ ಸರಳ ಸಂಸ್ಕಾರದ ಮೂಲಕ ಜರಗುವಂತೆ ಮಾಡಿದರು.

14. ಅಧಿಕಾರದಾಸೆಗೆ ಯಾವತ್ತೂ ಆಸೆ ಪಡದೇ ಪ್ರಭುತ್ವದ ಹಳವಂಡಗಳನ್ನು, ಪುರೋಹಿತಶಾಹಿಗಳ ಡಂಭಾಚಾರಗಳನ್ನು ನೇರ, ದಿಟ್ಟ, ನಿರಂತರವಾಗಿ ಖಂಡಿಸಿದರು.

15.ಸ್ವರ್ಗ ನರಕದ ಕಲ್ಪನೆಗಳನ್ನು ಅಲ್ಲಗಳೆದು "ಆಚಾರವೇ ಸ್ವರ್ಗ, ಅನಾಚಾರವೇ ನರಕ" ಎಂದರು.

16. 'ಶರಣು 'ಎಂದವರಿಗೆ 'ಶರಣು ಶರಣಾರ್ಥಿ'ಎಂದರು,' ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ 'ಎಂದು ಸರಳತೆ ಮೆರೆದರು.

17.ಇವರ ಏಕದೇವ ಶಿವನ ಕಲ್ಪನೆ ವಿಶಿಷ್ಟವಾದುದು, ಇವರು ನಿರ್ಗುಣ, ನಿರಾಕಾರ, ಅಯೋನಿಜ, ಹುಟ್ಟಿಲ್ಲದ, ಸಾವಿಲ್ಲದ ಶೂನ್ಯ ಶಿವನ ವಿಶ್ವರೂಪವನ್ನು' ಇಷ್ಟಲಿಂಗ' ರೂಪದಲ್ಲಿ ಎಡ ಅಂಗೈಯಲ್ಲಿಟ್ಟು ಸರಳವಾಗಿ ಏಕಾಗ್ರತೆಯಿಂದಮದ್ಯವರ್ಥಿಗಳಿಲ್ಲದೇ ಪೂಜಿಸಿಕೊಳ್ಳುವುದನ್ನು ಜಾರಿಗೆ ತಂದರು.

18.ಇವರ ಪ್ರಕಾರ ನಿರ್ಗುಣ ನಿರಾಕಾರ ದೇವನೊಬ್ಬ ಆತನ ನಾಮ ಹಲವು ಆದಕಾರಣವೇ ಬಸವಾದಿ ಶರಣರ ಅಂಕಿತನಾಮಗಳೂ ಭಿನ್ನವಾಗಿದ್ದವು.

19. ಸತಿ ಪತಿಗಳಲ್ಲೊಂದಾದ ಭಕ್ತಿಯು ಹಿತವಾಗಪ್ಪುದು ಶಿವಂಗೆ ಎಂದು ಘೋಷಿಸಿ ಸ್ತ್ರೀ - ಪುರುಷ ಸಮಾನತೆಯನ್ನೂ ಸಾರಿದರು.

20.ವ್ಯಕ್ತಿತ್ವ ವಿಕಸನಕ್ಕೆ ಸಪ್ತ ಸೂತ್ರಗಳಾದ 'ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ' ಎಂಬವುಗಳನ್ನು ನೀಡಿ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಒತ್ತು ನೀಡಿದರು.

ಪ್ರಸ್ತುತ ಈಗ ಘೋರ ವಿಸ್ಮೃತಿಗೆ ಸಂದಿರುವ ಸೋ ಕಾಲ್ಡ ಬಸವಾನುಯಾಯಿ ಲಿಂಗಾಯತ ಸಮುದಾಯವನ್ನು ಬಡಿದೆಚ್ಚರಿಸಲು ಗುರು ಬಸವ, ಪ್ರಭು ಅಲ್ಲಮ, ಅಕ್ಕಮಹಾದೇವಿ, ಚೆನ್ನಬಸವಣ್ಣರಾದಿಯಾಗಿ ಸಕಲ ಶರಣರು ಉದಿಸಿಬರಲಾರರು ಆದರೆ ಖಂಡಿತ ಅವರುಗಳ ಹೆಜ್ಜೆ ಗುರುತುಗಳೇ ದಾರಿದೀಪಗಳಾಗಬಲ್ಲವು. ಬಸವಣ್ಣನ ಕಾಲದಿಂದ ಇಲ್ಲಿಯವರೆಗಿನ ಸುದೀರ್ಘ ಪಯಣದಲ್ಲಿ  ಸಮುದಾಯ ಅನೇಕ ಅಡೆತಡೆಗಳನ್ನು ಎದುರಿಸಿದೆ ಮತ್ತೂ ಎದುರಿಸುತ್ತಿದೆ.. ಹಾದಿಯಲ್ಲಿ ಸಾಗಿ ಬರುವಾಗ ಪ್ರಭುತ್ವಕ್ಕೆ ಬಕೇಟ್ ಹಿಡಿಯಲು ತನ್ನತನವನ್ನು ಮರೆತು ಬಸವ ಮತ್ತವನ ಆದರ್ಶಗಳನ್ನು ಗಾಳಿಗೆ ತೂರಿ ವಚನ ಚಳುವಳಿಯ ತತ್ವ, ಮೌಲ್ಯಗಳನ್ನು ಗಂಟುಕಟ್ಟಿ ಮೂಲೆಗೆ ಎಸೆಯಲಾಗಿದೆ. ಅಂದು ಬಸವಾದಿ ಶರಣರು ಪ್ರಾಣವನ್ನೇ ಪಣಕ್ಕಿಟ್ಟು ಏನೇನು ವಿರೋಧಿಸಿದ್ದರೋ ಅವೆಲ್ಲವುಗಳನ್ನು ಅರಿವಿದ್ದೋ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಅರಿವಿಲ್ಲದೆಯೋ ಸಮುದಾಯದ ಜನ ಅಪ್ಪಿಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ ಮತ್ತು ಬಸವಾದಿಗಳ ಆದರ್ಶಗಳನ್ನು ಮರೆತಿದ್ದಾರೆ.

ಸಮ ಸಮಾಜದ ನಿರ್ಮಾಣದ ಬಗ್ಗೆ ಹಲವು ವಿಚಾರಧಾರೆಗಳನ್ನು ಬಸವಾದಿ ಶರಣರು ವಚನಗಳ ರೂಪದಲ್ಲಿ ಬಿಟ್ಟು ಹೋಗಿದ್ದಾರೆ. ಅವರ ಒಟ್ಟಾರೆ ವಿಚಾರಧಾರೆಗಳು ವೈದಿಕ ಧರ್ಮಕ್ಕಿಂತಲೂ ಭಿನ್ನವಾದವುಗಳು ಮತ್ತು ನೇರಾ ನೇರ ವಿರುದ್ಧವಾದವುಗಳು.ಇದೇ ಕಾರಣದಿಂದ ಸನಾತನಿಗಳಿಂದ ಕಲ್ಯಾಣ ಕ್ರಾಂತಿಯಲ್ಲಿ ಮರಣವನ್ನೇ ಮಹಾನವಮಿಯಾಗಿ ಸ್ವೀಕರಿಸಿ ಹತರಾದವರೆಷ್ಟೋ, ಅಮೂಲ್ಯ ಧಾರ್ಮಿಕ ಸಾಹಿತ್ಯವಾದ ವಚನಗಳನ್ನು ರಕ್ಷಿಸಲೋಸುಗ ದೇಶದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿ ಲಿಂಗೈಕ್ಯರಾದವರೆಷ್ಟೋ ತ್ಯಾಗಗಳ  ಹಿನ್ನೆಲೆಯಲ್ಲಿ ಬಸವಾನುಯಾಯಿಗಳು ತಮ್ಮ ಧರ್ಮವನ್ನು ಸೋ ಕಾಲ್ಡ ಹಿಂದೂ ಧರ್ಮದ ಸಂಕುಚಿತ ಜಾತಿಯ ಸಂಕೋಲೆಯಿಂದ ಬಿಡುಗಡೆಗೊಳಿಸಿ ಬಸವ ತತ್ವ ಪ್ರಚಾರಕ್ಕೆ ಮಾನ್ಯತೆಯ ಮುದ್ರೆ ಒತ್ತಬೇಕೆಂದು ಒತ್ತಾಯಿಸುತ್ತಿರುವುದು ಸರಿಯಾಗಿಯೇ ಇದೆ. ಇದರ ಹಿಂದಿನ ಪ್ರಚೋದಕ ಶಕ್ತಿ ಯಾವುದೇ ಇರಲಿ, ಸಾಂವಿಧಾನಿಕ ಮಾನ್ಯತೆಯ ಚಳುವಳಿ ಮಾತ್ರ ಮನುವಾದಿಗಳ ಪ್ರಭಾವಕ್ಕೆ ಒಳಗಾಗಿ ಬಸವಾದಿಗಳ ತತ್ವಗಳನ್ನು ಮರೆತಿರುವ  ಲಿಂಗಾಯತ ಸಮುದಾಯವನ್ನು ತಾನು ಯಾರು? ಎಂದು ಯೋಚಿಸಿಕೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಕಿಡಿಯಿಂದ ಮಹಾಜ್ವಾಲೆಯೆಂಬಂತೆ ಸಣ್ಣದಾಗಿ ಶುರುವಾದ ಚರ್ಚೆಗಳು ಇಂದು ಬಸವಾಭಿಮಾನಿಗಳನ್ನು ಗಂಭೀರ ಅಧ್ಯಯನಕ್ಕೆ ತೊಡಗಿಸಿರುವುದು ಮಾತ್ರ ಸುಳ್ಳಲ್ಲ.

ಕೊನೆಯ ಮಾತು: ಲಿಂಗಾಯತ ಧರ್ಮ, ಸ್ವತಂತ್ರ ಧರ್ಮವೊಂದು ಹೊಂದಿರಬೇಕಾದ ಎಲ್ಲ ಅರ್ಹತೆ ಗಳನ್ನೂ ಹೊಂದಿದೆ ಮಾತು ಬೇರೆ ಆದರೆ ಸಾಂವಿಧಾನಿಕ ಮಾನ್ಯತೆಯ ಉದ್ದೇಶ ಕೇವಲ ಮೀಸಲಾತಿಗೆ/ಸರಕಾರಿ ಸವಲತ್ತಿಗೆ ಸೀಮಿತಗೊಳಿಸದೇ  ಬಸವಣ್ಣನವರ ನಿಜವಾದ ಆಶಯವಾದ ವರ್ಣ ರಹಿತ, ವರ್ಗರಹಿತ, ಶೋಷಣೆ ಮುಕ್ತ, ಕಾಯಕ-ದಾಸೋಹಾಧಾರಿತ, ಸಮಾನ, ಸಕಲ ಜೀವಾತ್ಮರಿಗೂ ದಯೆ- ಲೇಸನ್ನೇ ಬಯಸುವ, ಸದಾ ತೆರೆದ ಬಾಗಿಲಿನ, ಸಾಮಾಜಿಕ ನ್ಯಾಯದ, ಭ್ರಾತೃತ್ವದ, ಸಕಲರನ್ನೂ ಒಳಗೊಂಡ, ಸೌಹಾರ್ದಯುತವಾದ ಶರಣ ಸಮುದಾಯದ ರಚನೆಯೂ ಆದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ.

                                                                                                                           ✍️ಆನಂದ ಬಸವರಾಜ ಉಂಡಿ

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,