Skip to main content

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ: 

ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ.

ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ
ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ.

1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯಲ್ ವರ್ಕ’ನ್ನು ಸೂಚಿಸುತ್ತದೆ. ತದನಂತರದ ವರ್ಷಗಳಲ್ಲಿ ಇದೇ ಶಾಲೆ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್’ ಎಂಬ ಮರುನಾಮದಿಂದ ಖ್ಯಾತವಾಗಿದೆ.

2.ಪ್ರಾಯೋಗಿಕ ಹಂತ(1947-56): ಈ ಹಂತದಲ್ಲಿ ‘ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ’ , ‘ಕಾಶಿ ವಿದ್ಯಾಪೀಠ’, ‘ಗುಜರಾತ್ ವಿದ್ಯಾಪೀಠ’ ಮತ್ತು ಇದೇ ತೆರನಾದ ಇತರೆ ಶಾಲೆಗಳು ಸ್ಥಾಪಿಸಲ್ಪಟ್ಟವು.

3.ವಿಸ್ತರಣೆಯ ಹಂತ(1957-76): ಈ ಹಂತದಲ್ಲಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಅಂದರೆ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ,ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಸಮಾಜ ಕಾರ್ಯ ಶಾಲೆಗಳು ಪ್ರಾರಂಭವಾದವು. ಇಲ್ಲಿ ವಿಸ್ತರಣೆಯೆಂಬುದು ದೇಶಾದ್ಯಂತ ಸಮಾಜ ಕಾರ್ಯ ಶಾಲೆಗಳ ಸಂಖ್ಯಾತ್ಮಕ ಹೆಚ್ಚಳಕ್ಕೆ ಸಂಬಂಧಿಸಿದೆ.

4.ನಿಶ್ಚಲತೆಯ ಹಂತ(1977-86): ಈ ಹಂತದಲ್ಲಿ ದೇಶದ ಸಮಾಜಕಾರ್ಯ ಶಾಲೆಗಳ ಸಂಖ್ಯೆಯಲ್ಲಿ ಹೇಳಿಕೊಳ್ಳುವ ಹೆಚ್ಚಳ ಕಂಡು ಬರುವುದಿಲ್ಲ.

5.ಸ್ಪೋಟಕ ಹಂತ(1986): ಈ ಹಂತದಲ್ಲಿ ದೇಶದ ಸಮಾಜಕಾರ್ಯ ಶಾಲೆಗಳ ಸಂಖ್ಯೆ 200ಕ್ಕೂ ಹೆಚ್ಚಿತು.( ಥಾಮಸ್: 2010)

ಭಾರತದಲ್ಲಿ ವೃತ್ತಿಪರ ಸಮಾಜಕಾರ್ಯ ಶಿಕ್ಷಣದ ಕೋರ್ಸುಗಳು

1.ಸಮಾಜಕಾರ್ಯಕ್ಕೆ ಸಂಬಂಧಿಸಿದ ಸರ್ಟಿಪಿಕೇಟ್ ಮತ್ತು ಡಿಪ್ಲೋಮಾ ಕೋರ್ಸು  (Certificate and Diploma Courses)
2.ಸಮಾಜಕಾರ್ಯ ಪದವಿ  (Bachelor of Social Work)
3.ಸಮಾಜಕಾರ್ಯದಲ್ಲಿ ಕಲಾ ಪದವಿ (Bachelor of Arts in Social Work)
4.ಸಮಾಜಕಾರ್ಯ ಸ್ನಾತಕೊತ್ತರ ಪದವಿ (Master of Social Work)
5.ಸಮಾಜಕಾರ್ಯದಲ್ಲಿ ಸ್ನಾತಕೊತ್ತರ ಕಲಾ ಪದವಿ (Master of Arts in Social Work)
6.ಎಂ.ಫಿಲ್ ( M.Phil)
7.ಪಿ.ಹೆಚ್.ಡಿ (Ph.D)
8.ಡಿ.ಲಿಟ್ (D.Lit)

ವಿಶೇಷಾಧ್ಯಯನ ಕ್ಷೇತ್ರಗಳು( Specialisations)
1.ನಗರ ಮತ್ತು ಗ್ರಾಮೀಣ ಸಮುದಾಯ ಅಭಿವೃದ್ಧಿ
2.ಮನೋವೈದ್ಯಕೀಯ ಸಮಾಜಕಾರ್ಯ/ ಮಾನಸಿಕ ಆರೋಗ್ಯ/ ವೈದ್ಯಕೀಯ ಸಮಾಜಕಾರ್ಯ
3.ಮಾನವ ಸಂಪನ್ಮೂಲ ಅಭಿವೃದ್ಧಿ/ ಕೈಗಾರಿಕಾ ಸಂಬಂಧ ಮತ್ತು ಸಿಬ್ಬಂದಿ ನಿರ್ವಹಣೆ
4. ಕುಟುಂಬ ಮತ್ತು ಮಕ್ಕಳ ಕಲ್ಯಾಣ
5. ಸಾರ್ವಜನಿಕ ಆರೋಗ್ಯ
6. ಅಪರಾಧ ಶಾಸ್ತ್ರ ಮತ್ತು ನ್ಯಾಯ
7. ದಲಿತ ಮತ್ತು ಬುಡಕಟ್ಟು ಅಧ್ಯಯನ
8. ಅಸಮರ್ಥತೆಯ ಅಧ್ಯಯನ
9.  ಜೀವನೋಪಾಯ ಮತ್ತು ಸಾಮಾಜಿಕ ಸಾಹಸೋದ್ಯಮ
10. ಆಪ್ತ ಸಮಾಲೋಚನೆ
11. ಗ್ರಾಮೀಣ ಪುನರ್ ನಿರ್ಮಾಣ
12. ಶಾಲಾ ಸಮಾಜಕಾರ್ಯ
13. ವೃದ್ದಾಪ್ಯ ಶಾಸ್ತ್ರ ಇತ್ಯಾದಿ.

ಪಠ್ಯಕ್ರಮ ಸಂರಚನೆ( Curriculam Structure)
ವಿಶ್ವವಿದ್ಯಾಲಯ ಧನಸಹಾಯ ಆಯೋಗದ, ಸಮಾಜಕಾರ್ಯ ಶಿಕ್ಷಣದ ಕುರಿತಾದ ಮೂರನೇ ಪುನರಾವಲೋಕನ ಸಮಿತಿಯು(2001) ಸಮಾಜಕಾರ್ಯ ಶಿಕ್ಷಣವನ್ನು, ಸಾಮಾಜಿಕ ವಾಸ್ತವತೆಗೆ ಸಹ ಸಂಬಂಧೀಕರಿಸುವುದರ ಅಗತ್ಯತೆಯ ಕುರಿತು ಮಾತನಾಡುತ್ತದೆ. ಅದು ಸಮಾಜಕಾರ್ಯದ ಪಠ್ಯಕ್ರಮವನ್ನು 4 ಭಾಗಗಳಾಗಿ ವರ್ಗೀಕರಿಸುವಂತೆ ಶಿಪಾರಸ್ಸು ಮಾಡಿದೆ-

1.ಮೂಲ ಭಾಗ(The Core Domain): ಸಮಾಜಕಾರ್ಯದ ತತ್ವಶಾಸ್ತ್ರ, ತತ್ವಾದರ್ಶ, ಮೌಲ್ಯಗಳು, ನೀತಿಶಾಸ್ತ್ರ, ಪರಿಕಲ್ಪನೆಗಳು.
2.ಸಹಾಯಕ ಭಾಗ(The Supportive Domain): ಮೂಲ ಭಾಗಕ್ಕೆ ಸಹಾಯಕವಾದ ಜ್ಞಾನ ಮತ್ತು ಕೌಶಲ್ಯಗಳು.
3.ಅಂತರ್ಶಿಸ್ತೀಯ ಭಾಗ(The Interdisciplinary Domain): ಸಮಾಜಕಾರ್ಯ ವೃತ್ತಿಗೆ ಸಂಬಂಧಿಸಿದ ಇತರ ಜ್ಞಾನ ಶಿಸ್ತುಗಳು ಅಂದರೆ- ಮನಃಶಾಸ್ತ್ರ,ಸಮಾಜಶಾಸ್ತ್ರ, ಮಾನವಶಾಸ್ತ್ರ, ಅರ್ಥಶಾಸ್ತ್ರ, ಅಪರಾಧ ಶಾಸ್ತ್ರ, ಇತ್ಯಾದಿಗಳು.
4. ಐಚ್ಚಿಕ ಭಾಗ (The Elective Domain): ಇದು ಐಚ್ಚಿಕ ಕೋರ್ಸುಗಳನ್ನು ಒಳಗೊಂಡಿದೆ.

ಸಮಾಜಕಾರ್ಯ ಶಾಲೆಗಳ ಭೌಗೋಳಿಕ ಹಂಚಿಕೆ
ಬಲ್ಲ ಮೂಲಗಳ ಪ್ರಕಾರ ದೇಶಾದ್ಯಂತ ಸುಮಾರು 350 ಸಮಾಜಕಾರ್ಯ ಶಾಲೆಗಳು ಕಾರ್ಯನಿರತವಾಗಿದ್ದು, ಅವುಗಳಲ್ಲಿ ಕರ್ನಾಟಕವೊಂದರಲ್ಲಿಯೇ 72 ಶಾಲೆಗಳು, ಮಹಾರಾಷ್ಟ್ರದಲ್ಲಿ 60 ಮತ್ತು ಇತರೆ ದಕ್ಷಿಣದ ರಾಜ್ಯಗಳು ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ಹೊಂದಿವೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಿಝೋರಾಂ, ಮಣಿಪುರ ಮತ್ತು ಬಿಹಾರ ರಾಜ್ಯಗಳು ತಲಾ ಒಂದೊಂದು ಸಮಾಜಕಾರ್ಯ ಶಾಲೆಗಳನ್ನು ಹೊಂದಿವೆ. ಈಶಾನ್ಯ ಭಾರತದ ಐದು ರಾಜ್ಯಗಳಲ್ಲಿ ಯಾವೊಂದು ರಾಜ್ಯವೂ ಸಮಾಜಕಾರ್ಯ ಶಾಲೆಗಳನ್ನು ಹೊಂದಿಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇಶದ ಬಹಳಷ್ಟು ಸಮಾಜಕಾರ್ಯ ಶಾಲೆಗಳು ನಗರ ಪ್ರದೇಶಗಳಲ್ಲಿಯೇ ಕೇಂದ್ರೀಕೃತವಾಗಿವೆ. ವಿದ್ಯಾರ್ಥಿಗಳೂ ಕ್ಷೇತ್ರಕಾರ್ಯ ಪ್ರಯೋಗವನ್ನು ನಗರಗಳಲ್ಲಿಯೇ ಮಾಡುತ್ತಿದ್ದಾರೆ. ಉದ್ಯೋಗವನ್ನೂ ನಗರ ವiತ್ತು ಮಹಾನಗರಗಳಲ್ಲಿಯೇ ಮಾಡಲು ಬಯಸುತ್ತಾರೆ. ಆದರೆ ಸಮಾಜಕಾರ್ಯದ ಅವಶ್ಯಕತೆ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗಿದೆ. ಏಕೆಂದರೆ ಇಂದಿಗೂ ಭಾರತದ ಬಹುಸಂಖ್ಯಾತ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಸಮಸ್ಯೆಗಳು
ಮೇಲಿನ ಎಲ್ಲ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ವೃತ್ತಿಪರ ಸಮಾಜಕಾರ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಸಮಸ್ಯೆಗಳನ್ನು ಗುರುತಿಸಲಾಗಿದೆ.

1.ವೃತ್ತಿಪರ ಶಿಕ್ಷಣ ಎಂದು ಸಾರ್ವಜನಿಕವಾಗಿ ಪರಿಗಣಿತವಾಗಿಲ್ಲದಿರುವಿಕೆ.
2. ದೇಶೀಯ ಅಧ್ಯಯನ ಸಾಮಗ್ರಿ, ಸಾಹಿತ್ಯದ ಕೊರತೆ.
3. ಏಕ ರೀತಿಯ, ವಸ್ತುನಿಷ್ಟ ಪಠ್ಯಕ್ರಮವಿಲ್ಲದಿರುವಿಕೆ.
4. ವೃತ್ತಿ ಅನುಭವವಿಲ್ಲದ ಮತ್ತು ಅನರ್ಹ ಶಿಕ್ಷಕರು.
5. ಸಮಾಜಕಾರ್ಯ ಶಿಕ್ಷಕರಿಗೆ ಕಡಿಮೆ ಸಂಬಳ.
6. ಗುಣಮಟ್ಟ ಮತ್ತು ಪ್ರಮಾಣೀಕರಣದ ಕೊರತೆ.
7. ಬೋಧನೆ ಮತ್ತು ಕಲಿಕೆಯ ಮಾಧ್ಯಮ.
8. ಅಧಿಕ ವೆಚ್ಛದಾಯಕ ಶಿಕ್ಷಣ.
9.ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಬೇಕಾದ ವಾತಾವರಣವಿಲ್ಲದಿರುವಿಕೆ.
10. ಮುಕ್ತ ಮತ್ತು ದೂರಶಿಕ್ಷಣದ ಅರಿವಿನ ಕೊರತೆ.
11. ಪ್ರಾಯೋಗಿಕ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು.
12. ನಗರ ಕೇಂದ್ರೀತ ಶಾಲೆಗಳು.

1.ವೃತ್ತಿಪರ ಶಿಕ್ಷಣ ಎಂದು ಸಾರ್ವಜನಿಕವಾಗಿ ಪರಿಗಣಿತವಾಗಿಲ್ಲದಿರುವಿಕೆ.
ಭಾರತದಲ್ಲಿ ಇನ್ನೂವರೆಗೂ ಸಮಾಜಕಾರ್ಯ ಒಂದು ಪರಿಪೂರ್ಣವಾದ ವೃತ್ತಿ ಎಂದು ಪರಿಗಣಿತವಾಗಿಲ್ಲ. ಅದೇ ರೀತಿ ಸಮಾಜಕಾರ್ಯ ಶಿಕ್ಷಣವೂ ಕೂಡ ವೃತ್ತಿಪರ ಶಿಕ್ಷಣ ಅಂತ ಸಮಾಜದಲ್ಲಿ ಗುರತಿಸಿಕೊಂಡಿಲ್ಲ. ಉಳಿದ ಪದವಿ, ಸ್ನಾತಕೋತ್ತರ ಪದವಿಗಳಂತೆ ಇದನ್ನು ಕಾಣಲಾಗುತ್ತಿದೆ. ಸಮಾಜಕಾರ್ಯ ಪದವಿಧರರೂ ಕೂಡ ಉದ್ಯೋಗ ಪಡೆದ ನಂತರ ತಮ್ಮನ್ನು ಒಬ್ಬ ಅಧಿಕಾರಿಯಾಗಿಯೋ ಅಥವಾ ಇನ್ನಿತರ ಪದನಾಮಗಳಿಂದಲೋ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆಯೇ ವಿನಃ ಹೆಮ್ಮೆಯಿಂದ ತಾನೊಬ್ಬ ತರಬೇತಿ ಪಡೆದ ವೃತ್ತಿಪರ ಸಮಾಜಕಾರ್ಯಕರ್ತ ಅಂತ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಮಾಜಕಾರ್ಯ ಶಿಕ್ಷಣ ಸಮಾಜದಲ್ಲಿ ಅಪರಿಚಿತವಾಗಿ ಉಳಿದಿದೆ.

2. ದೇಶೀಯ ಅಧ್ಯಯನ ಸಾಮಗ್ರಿ, ಸಾಹಿತ್ಯದ ಕೊರತೆ.
ನಮಗೆಲ್ಲ ಗೊತ್ತಿರುವ ಹಾಗೆ ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೂಡುಗೆ. ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣ, ಅಮೇರಿಕೆಯ ಯಥಾವತ್ ಮಾದರಿ. ಪಾಶ್ಚಾತ್ಯ ಸಮಾಜಕಾರ್ಯ ಶಿಕ್ಷಣತಜ್ಞರು ಅವರ ನೆಲಕ್ಕೆ ತಕ್ಕಂತೆ ರೂಪಿಸಿದ ಸಿದ್ಧಾಂತ, ಪರಿಕಲ್ಪನೆ, ವಿಧಾನ, ಪರಿದೃಷ್ಟಿಗಳು ಭಾರತದ ಸಂದರ್ಭದಲ್ಲಿ ಹೇಳಿಕೊಳ್ಳುವ ಫಲಶೃತಿಯನ್ನು ನೀಡುತಿಲ್ಲ ಎಂಬ ಅಪವಾದವಿದೆ. ಪಾಶ್ಚಾತ್ಯ ಸಮಾಜಕಾರ್ಯ ಸಾಹಿತ್ಯ ಕೇವಲ ಪರೀಕ್ಷೆ ಬರೆದು ಪಾಸಾಗಲಿಕ್ಕೆ ಸೀಮಿತವಾಗುತ್ತಿದೆಯೇ ವಿನಃ ವಾಸ್ತವದ ವೃತ್ತಿಯಲ್ಲಿ ಬಳಕೆಯಾಗುತ್ತಿಲ್ಲ. ಸಮಜಕಾರ್ಯದ ಸಾಹಿತ್ಯವೆಲ್ಲ ಆಂಗ್ಲ ಬಾಷೆಯಲ್ಲಿ ಲಭ್ಯವಿದ್ದು ಗ್ರಾಮೀಣ ಭಾರತದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆಯಲ್ಲದೇ, ಅವರನ್ನು ನಿರಾಸಕ್ತರನ್ನಾಗಿಸುತ್ತಿದೆ.

3. ಏಕ ರೀತಿಯ, ವಸ್ತುನಿಷ್ಟ ಪಠ್ಯಕ್ರಮವಿಲ್ಲದಿರುವಿಕೆ.
ದೇಶದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಮಾನ್ಯತೆಗೆ ಒಳಪಟ್ಟ 350 ಕ್ಕೂ ಹೆಚ್ಚಿನ ಸಮಾಜಕಾರ್ಯ ಶಾಲೆಗಳಿದ್ದು, ಅವೆಲ್ಲವೂಗಳು ತಮ್ಮ ವಿಶ್ವವಿದ್ಯಾಲಯ ರೂಪಿಸಿದ ಪಠ್ಯಕ್ರಮವನ್ನು ಅನುಸರಿಸುತ್ತಿವೆ. ಈ ಪಠ್ಯಕ್ರಮ ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಭಿನ್ನವಾಗಿವೆ. ಅವು ಒದಗಿಸುವ ವಿಶೇಷಾಧ್ಯಯನ ಕ್ಷೇತ್ರಗಳೂ ಭಿನ್ನವಾಗಿವೆ. ಹೀಗಾಗಿ ಗುಣಟ್ಟ ಕಾಯ್ದುಕೊಳ್ಳುವಿಕೆಯಲ್ಲಿ ತೀವ್ರ ತೊಂದರೆಯುಂಟಾಗುತ್ತಿದೆ.

4. ವೃತ್ತಿ ಅನುಭವವಿಲ್ಲದ ಮತ್ತು ಅನರ್ಹ ಶಿಕ್ಷಕರು.
ವೃತ್ತಿಯ ನೈಜ ಅನುಭವವಿಲ್ಲದೇ ಕೇವಲ ಸಮಾಜಕಾರ್ಯ ಸ್ನಾತಕೋತ್ತರ ಪದವಿ, ಸಮಾಜಕಾರ್ಯದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಮತ್ತು ರಾಜ್ಯ ಅರ್ಹತಾ ಪರೀಕ್ಷೆ (SET) ಉತ್ತೀರ್ಣರಾದ ಮಾತ್ರಕ್ಕೆ ಸಮಾಜಕಾರ್ಯ ಬೋಧಕರಾಗಿ ಆಯ್ಕೆ ಮಾಡುವುದರಿಂದ ಮತ್ತು ಕೆಲವು ಶಾಲೆಗಳಲ್ಲಿ  ಸಮಾಜಕಾರ್ಯಕ್ಕೆ ಸಂಬಂಧಪಡದ ಬೇರೆ ಜ್ಞಾನ ಶಾಖೆಯ ವ್ಯಕ್ತಿಗಳು ಬೋಧಕರಾಗಿ ನೇಮಕವಾಗುತ್ತಿರುವುದರಿಂದ ಶಿಕ್ಷಣದ ಗುಣ ಮಟ್ಟದಲ್ಲಿ ಕುಸಿತವುಂಟಾಗುತ್ತಿದೆ. ಸಮಾಜಕಾರ್ಯ ಬೋಧಕನಿಗೆ ಸೈದ್ಧಾಂತಿಕ ಜ್ಞಾನದ ಜೊತೆ ಜೊತೆಗೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಜ್ಞಾನವೂ ಅಗತ್ಯ.

5. ಸಮಾಜಕಾರ್ಯ ಶಿಕ್ಷಕರಿಗೆ ಕಡಿಮೆ ಸಂಬಳ.
ಎಲ್ಲ ಅರ್ಹತೆಗಳನ್ನು ಹೊಂದಿದ ಸಮಾಜಕಾರ್ಯ ಬೋಧಕರಿಗೆ ಕೆಲವು ಖಾಸಗಿ ಶಾಲೆಗಳಲ್ಲಿ ಕನಿಷ್ಟ ವೇತನವನ್ನೂ ಪಾವತಿಸಲಾಗುತ್ತಿಲ್ಲವಾದ್ದರಿಂದ ಪ್ರತಿಭಾವಂತರಾರೂ ಬೋಧಕ ವೃತ್ತಿಯ ಕಡೆಗೆ ಬರುತ್ತಿಲ್ಲ. ಹೀಗಾಗಿ ಕಡಿಮೆ ಸಂಬಳಕ್ಕೆ ಸಿಕ್ಕುವವರನ್ನೇ ಗುಣಮಟ್ಟದೊಂದಿಗೆ ರಾಜಿಯಾಗಿ ನೇಮಕಮಾಡಿಕೊಳ್ಳಲಾಗುತ್ತಿದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಬೋಧಕರು ಒಲ್ಲದ ಮನಸ್ಸಿನಿಂದಲೇ ಕಾಟಾಚಾರಕ್ಕೆಂಬಂತೆ ಪಾಠ, ಪ್ರವಚನ ನಡೆಸುತ್ತಿದ್ದಾರೆ.

6. ಗುಣಮಟ್ಟ ಮತ್ತು ಪ್ರಮಾಣೀಕರಣದ ಕೊರತೆ.
ಸಮಾಜಕಾರ್ಯ ಶಿಕ್ಷಣದ ಗುಣಮಟ್ಟವನ್ನು ಅಳೆಯುವ ನಿರ್ದಿಷ್ಟ ಮಾನದಂಡಗಳು ದೇಶದಲ್ಲಿ ಲಭ್ಯವಿಲ್ಲ, ಗುಣಮಟ್ಟ ಖಾತರಿಪಡಿಸಿ, ಪ್ರಮಾಣೀಕರಿಸುವ ಪ್ರಾತಿನಿಧಿಕ ಸಂಸ್ಥೆಯೂ ಇಲ್ಲವಾದ್ದರಿಂದ ಸಮಾಜಕಾರ್ಯ ಶಿಕ್ಷಣದ ಸ್ಥಿತಿ ಡೋಲಾಯಮನವಾಗಿದೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಸಮಾಜಕಾರ್ಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಹಣವನ್ನು ಪೀಕಲಾಗುತ್ತಿದೆಯೆ ವಿನ: ಅದಕ್ಕೆ ತಕ್ಕ ಶಿಕ್ಷಣ, ತರಬೇತಿ ನೀಡಲಾಗುತ್ತಿಲ್ಲ. ಇತ್ತಿಚಿಗೆ ಒಂದು ತರಗತಿಗೆ 60ರವರೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರುವದರಿಂದ, ವಿದ್ಯಾರ್ಥಿಗಳ ಕಡೆಗೆ ವೈಯಕ್ತಿಕ ಗಮನ ಸಾಧ್ಯವಾಗುತ್ತಿಲ್ಲ. ಕೆಲವು ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಹಲವು ಶಾಲೆಗಳಲ್ಲಿ ಸಂಬಂಧಿತ ಗ್ರಂಥಾಲಯವೇ ಇಲ್ಲ.

7.ಬೋಧನೆ ಮತ್ತು ಕಲಿಕೆಯ ಮಾಧ್ಯಮ.
ಸಮಾಜಕಾರ್ಯ ಬೋಧನೆಯ ಮಾಧ್ಯಮ ಆಂಗ್ಲ ಭಾಷೆಯಲ್ಲಿದ್ದರೆ ಸೂಕ್ತವಾದರೂ ವಿವಿಧ ಸಾಮಾಜೀಕ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಅದು ನುಂಗಲಾರÀದ ತುತ್ತಾಗಿ ಪರಿಣಮಿಸುತ್ತದೆ. ಆಂಗ್ಲ ಭಾಷೆಗೆ ಹೆದರಿಯೇ ಕೆಲವು ವಿದ್ಯಾರ್ಥಿಗಳು ಕೋರ್ಸನ್ನು ತೊರೆದ ಉದಾಹರಣೆಗಳಿವೆ. ಇಂತ ಸಂದರ್ಭದಲ್ಲಿ ಆಂಗ್ಲ ಮಾದ್ಯಮದಲ್ಲಿನ ಬೋಧನೆ ಸಮಾಜಕಾರ್ಯವನ್ನು ಅರ್ಥ ಮಾಡಿಕೊಳ್ಳಲು ತೊಡಕಾಗಿ ಪರಿಣಮಿಸುತ್ತದೆ. ಮತ್ತು ಅಪಾರ್ಥ ಆಚರಣೆಗಳಿಗೆ ಕಾರಣವಾಗುತ್ತದೆ.

8. ಅಧಿಕ ವೆಚ್ಛದಾಯಕ ಶಿಕ್ಷಣ.
‘ಸಮಾಜಕಾರ್ಯ ಶಿಕ್ಷಣ ಬಡವಿದ್ಯಾರ್ಥಿಗಳ ಶ್ರೀಮಂತ ಕೋರ್ಸು’ ಎಂಬ ಅಪವಾದವಿದೆ. ಏಕೆಂದರೆ ಭಾರತದಲ್ಲಿ ಈ ಕೋರ್ಸುಗಳಿಗೆ ದಾಖಲಾಗುವ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರೇ ಆಗಿರುತ್ತಾರೆ. ಗುಣಮಟ್ಟವಿಲ್ಲದ ಸರಕಾರಿ ಶಾಲೆಗಳಿಗಿಂತ, ಗುಣಮಟ್ಟದ ಖಾಸಗಿ ಸಮಾಜಕಾರ್ಯ ಶಾಲೆಗಳಲ್ಲಿ ಅಧಿಕ ಮೊತ್ತದ ಶುಲ್ಕ ವಸೂಲಾತಿ ನಡೆಯುತ್ತದೆ. ಸಮಾಜಕಾರ್ಯ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕವಾಗಿ ಯಾವುದೇ ಶಿಷ್ಯವೇತನಗಳು ಲಭ್ಯವಿಲ್ಲ. ತರಬೇತಿಯ ಸಮಯದಲ್ಲಿ ಕ್ಷೇತ್ರಕಾರ್ಯ, ಕ್ಷೇತ್ರಭೇಟಿ, ಸಮಾಜಕಾರ್ಯ ಶಿಬಿರ, ಕ್ಷೇತ್ರ ಸ್ಥಳ ನಿಯೊಜನೆ, ವಿಶೇಷ ಅಧ್ಯಯನ ಶಿಬಿರ, ಅಧಿಕ ಮೊತ್ತದ ಪುಸ್ತಕ ಖರೀದಿ, ಸಂಶೋಧನೆ ಇತ್ಯಾದಿಗಳಿಗಾಗಿ ಹಣವನ್ನು ವ್ಯಯಿಸಬೇಕಾಗುತ್ತದೆ.

9.ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಬೇಕಾದ ವಾತಾವರಣವಿಲ್ಲದಿರುವಿಕೆ.
ನಮ್ಮ ದೇಶದ ಸಮಾಜಕಾರ್ಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ಬೇಕಾದ ವಾತಾವರಣ ಇಲ್ಲದಿರುವುದು ಕಳವಳಕಾರಿ ಸಂಗತಿ. ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ಅವಶ್ಯಕವಾದ ಮತ್ತು ತರಗತಿಗಳನ್ನು ಹೊರತುಪಡಿಸಿದ ಕಾರ್ಯಾಗಾರ, ವಿಚಾರ ಸಂಕಿರಣ, ವಿಚಾರ ಗೋಷ್ಠಿ, ಸಮ್ಮೇಳನ, ಚರ್ಚಾಕೂಟ, ಕಮ್ಮಟ, ಶಿಬಿರಗಳು ಬಹುತೇಕ ಸಮಾಜಕಾರ್ಯ ಶಾಲೆಗಳಲ್ಲಿ ನಡೆಯುವುದೇ ಇಲ್ಲ.

10. ಮುಕ್ತ ಮತ್ತು ದೂರಶಿಕ್ಷಣದ ಅರಿವಿನ ಕೊರತೆ.
ದೇಶದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಗಳಂತವು ಸಮಾಜಕಾರ್ಯದಲ್ಲಿ ದೂರಶಿಕ್ಷಣ ನೀಡುತ್ತಿರುವ ವಿಷಯ ಹಲವರಿಗೆ ಗೊತ್ತೆ ಇಲ್ಲ. ಸಮಾಜಕಾರ್ಯ ತರಬೇತಿಯಿಲ್ಲದೇ ಅಥವಾ ಸಮಾಜ ಕಾರ್ಯದಲ್ಲಿ ಉನ್ನತ ಶಿಕ್ಷಣ ಪಡೆಯದೇ ಕಾರ್ಯನಿರ್ವಹಿಸುತ್ತಿರುವವರಿಗೆ ಇದು ವರದಾನವಾದರೂ ಸದುಪಯೋಗ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವೇನಾಗಿಲ್ಲ. ಅದೂ ಅಲ್ಲದೇ ಕೆಲವು ನಕಲಿ ವಿವಿಗಳ ಮುಕ್ತ ಮತ್ತು ದೂರಶಿಕ್ಷಣ ಕೋರ್ಸುಗಳು ಪ್ರಮಾಣಪತ್ರ ಬಿಟ್ಟು ಮತ್ತೇನೂ ನೀಡುತ್ತಿಲ್ಲ.

11. ಪ್ರಾಯೋಗಿಕ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು.
ಕ್ಷೇತ್ರಕಾರ್ಯ ಸಮಾಜಕಾರ್ಯದ ಅವಿಭಾಜ್ಯ ಅಂಗ, ಹಲವು ಶಾಲೆಗಳು ಈ ಬಗ್ಗೆ ಗಂಭೀರವಾಗಿಲ್ಲ. ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು, ಭವಿಷ್ಯದ ಉದ್ಯೋಗಕ್ಕೆ ಸಜ್ಜುಗೊಳಿಸಲು ಕ್ಷೇತ್ರಕಾರ್ಯ ಸಹಾಯಕ. ಆದರೆ ವಿದ್ಯಾರ್ಥಿಗಳು ಇದನ್ನೊಂದು ಕಾಟಾಚಾರವಾಗಿ ಭಾವಿಸುತ್ತಾರೆ.ಕ್ಷೇತ್ರಕಾರ್ಯವಿಂದು ಸರಿಯಾದ ಯೋಜನೆ, ನಿಯೋಜನೆ, ಮೇಲ್ವೀಚಾರಣೆ, ಮಾರ್ಗದರ್ಶನ, ಹಿಮ್ಮಾಹಿತಿಯ ಕೊರತೆಯನ್ನು ಅನುಭವಿಸುತ್ತಿದೆ. ಮತ್ತು ಕ್ಷೇತ್ರಕಾರ್ಯ ನಿಯೋಗಗಳಿಂದ ವಿದ್ಯಾರ್ಥಿಗಳು ಸರಯಾದ ಬೆಂಬಲ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ವೃತ್ತಿ ಭವಿಷ್ಯವಿಲ್ಲದ ಪ್ರಾಯೋಗಿಕ ಜ್ಞಾನ ನೀಡಲಾಗುತ್ತಿದೆ. ಉದಾ: ಬಿ.ಎಸ್.ಡಬ್ಲ್ಯೂ ಪದವಿಯಲ್ಲಿ ಪಡೆಯುವ ಶಾಲಾ ಸಮಾಜಕಾರ್ಯದ ಕ್ಷೇತ್ರ ಕಾರ್ಯ.

12. ನಗರ ಕೇಂದ್ರೀತ ಶಾಲೆಗಳು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇಶದ ಬಹಳಷ್ಟು ಸಮಾಜಕಾರ್ಯ ಶಾಲೆಗಳು ನಗರ ಪ್ರದೇಶಗಳಲ್ಲಿಯೇ ಕೇಂದ್ರೀಕೃತವಾಗಿವೆ. ವಿದ್ಯಾರ್ಥಿಗಳೂ ಕ್ಷೇತ್ರಕಾರ್ಯ ಪ್ರಯೋಗವನ್ನು ನಗರಗಳಲ್ಲಿಯೇ ಮಾಡುತ್ತಿದ್ದಾರೆ. ಉದ್ಯೋಗವನ್ನೂ ನಗರ ಮತ್ತು ಮಹಾನಗರಗಳಲ್ಲಿಯೇ ಮಾಡಲು ಬಯಸುತ್ತಾರೆ. ಆದರೆ ಸಮಾಜಕಾರ್ಯದ ಅವಶ್ಯಕತೆ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗಿದೆ. ಏಕೆಂದರೆ ಇಂದಿಗೂ ಭಾರತದ ಬಹುಸಂಖ್ಯಾತ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಸಲಹೆಗಳು
ಸಮಾಜಕಾರ್ಯ ಶಿಕ್ಷಣದ  ಪ್ರಸ್ತುತ ಸಮಸ್ಯೆಗಳ ಆಳ ಅಗಲಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ, ಸಮಾಜಕಾರ್ಯ ಶಾಲೆಗಳು ಮತ್ತು ಸಮಾಜಕ್ಕೆ ಈ ಕೆಳಗಿನ ಸಲಹೆಗಳನ್ನು ಸೂಚಿಸಬಹುದು-

1. ಸಮಾಜಕಾರ್ಯ ಶಿಕ್ಷಣದ ಪಠ್ಯಕ್ರಮದಲ್ಲಿ ಏಕರೂಪತೆ, ಗುಣಮಟ್ಟತೆ, ಶಿಕ್ಷಣ ಸಂಸ್ಥೆಗಳ ಮಾನ್ಯತೆ, ಪ್ರಮಾಣೀಕರಣ ಇತ್ಯಾದಿಗಳ ನಿಯಂತ್ರಣಕ್ಕಾಗಿ ಸಮಾಜಕಾರ್ಯ ರಾಷ್ಟ್ರೀಯ ಪರಿಷತ್ (National Council for Social Work) ಸ್ಥಾಪಿಸುವುದು.

2. ಸಮಾಜಕಾರ್ಯ ಶಿಕ್ಷಣವನ್ನು ಭಾರತೀಕರಣಗೊಳಿಸುವುದು, ಅಂದರೆ ಈ ನೆಲಕ್ಕೆ ಹೊಂದಾಣಿಕೆಯಾಗಬಲ್ಲ ಸಮಾಜಕಾರ್ಯ ವಿಧಾನ, ಸಿದ್ಧಾಂತ, ಮೌಲ್ಯ, ತತ್ವಾದರ್ಶ, ನೀತಿಶಾಸ್ತ್ರಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು. ಮತ್ತು ಅದಕ್ಕೆ ತಕ್ಕಂತೆ ಸಾಹಿತ್ಯ ರಚನೆಗೆ ಸರಕಾರದಿಂದ ಪ್ರೊತ್ಸಾಹ ನೀಡುವುದು.

3. ಸಮಾಜಕಾರ್ಯದಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿ ಅನುಭವ ಹೊಂದಿದವರನ್ನು ಮಾತ್ರ ಸಮಾಜಕಾರ್ಯ ಶಾಲೆಗಳ ಬೋಧಕರನ್ನಾಗಿ ನೇಮಿಸುವದು ಮತ್ತು ಉತ್ತಮ ಸಂಬಳ ನೀಡುವುದು.

4. ಪ್ರವೇಶ ಪಡೆದ ವಿದ್ಯಾರ್ಥಿಗಳ ಆಂಗ್ಲ ಭಾಷಾ ಸಂವಹನ ಸುಧಾರಿಸಲು ಅಗತ್ಯವಾದ ತರಬೇತಿ ನೀಡುವುದು. ಅವರ ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ದಿಗೆ ಅವಶ್ಯಕವಾದ ಎಲ್ಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

5. ಸಮಾಜಕಾರ್ಯ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಶಿಷ್ಯವೇತನ, ಸರಕಾರದ ಕಲ್ಯಾಣ ಇಲಾಖೆ/ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕ್ಷೇತ್ರಕಾರ್ಯಕ್ಕೆ ಅನುಮತಿಯ ವ್ಯವಸ್ಥೆ ಮಾಡುವುದು. ದೇಶಾದ್ಯಂತ ಏಕರೂಪದ, ಸಮರ್ಥವಾದ,ಸರಿಯಾದ, ವ್ಯವಸ್ಥಿತವಾದ ಸಮಾಜಕಾರ್ಯ ಶಿಕ್ಷಣದ ಪಠ್ಯಕ್ರಮ ಜಾರಿಗೊಳಿಸುವುದು.

6.ಸಮಾಜಕಾರ್ಯಕರ್ತರನ್ನು ಪ್ರತಿನಿಧಿಸುವ ಸಮಾಜಕಾರ್ಯ ವೃತ್ತಿಪರ ಸಂಘಟನೆಗಳನ್ನು ಬೆಳೆಸುವುದು. ಸಮಾಜಕಾರ್ಯ ಶಾಲೆಗಳು ಸರಕಾರೇತರ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು.

7.ಔಪಚಾರಿಕ ಶಿಕ್ಷಣ ಪಡೆಯದೇ ಸಮಾಜಕಲ್ಯಾಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾಜಕಾರ್ಯದಲ್ಲಿ ದೂರ ಮತ್ತು ಮುಕ್ತಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವುದು.

8. ಗ್ರಾಮೀಣ ಭಾಗಗಳಲ್ಲಿಯೂ ಉತ್ತಮ ಗುಣಮಟ್ಟದ ಸರಕಾರಿ ಸಮಾಜಕಾರ್ಯ ಶಾಲೆಗಳನ್ನು ತೆರೆಯುವುದು. ಆರ್ಥಿಕ ದುಸ್ಥಿತಿಯಲ್ಲಿರುವ ಸಮಾಜಕಾರ್ಯ ಶಾಲೆಗಳಿಗೆ ಅನುದಾನ ನೀಡುವದು.

9. ಕಾಲಕ್ಕೆ ತಕ್ಕ ಪಠ್ಯಕ್ರಮ ಹಾಗೂ ವಿಶೇಷಾಧ್ಯಯನ ಕ್ಷೇತ್ರಗಳನ್ನು ಸಂಶೋಧಿಸಿ ಜಾರಿಗೆ ತರುವುದು.

10.ಸಮಾಜಕಾರ್ಯ ಶಾಲೆಗಳ ಸೌಕರ್ಯಗಳನ್ನು ಉನ್ನತೀಕರಣಗೊಳಿಸುವುದು. ಅಧುನಿಕ ತಂತ್ರಜ್ಞಾನಗಳನ್ನು ಬಳಸಿ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಸುಗಮಗೊಳಿಸುವುದು.

11.ಸಮಾಜಕಾರ್ಯ ಶಿಕ್ಷಣಕ್ಕೆ ಸಂಬಂಧಪಟ್ಟ ಸಂಶೋಧನೆಗಳಿಗೆ ಎಲ್ಲ ಬಗೆಯ ಸಹಾಯ ಮಾಡುವುದು.

12.ದೇಶಾದ್ಯಂತ ಏಕರೂಪದ, ಸಮರ್ಥವಾದ,ಸರಿಯಾದ, ವ್ಯವಸ್ಥಿತವಾದ ಸಮಾಜಕಾರ್ಯ ಶಿಕ್ಷಣದ ಪಠ್ಯಕ್ರಮ ಜಾರಿಗೊಳಿಸುವುದು.

ಉಪಸಂಹಾರ

ಸಮಾಜಕಾರ್ಯ ಶಿಕ್ಷಣ ಮೊದಲಿನಿಂದಲೂ ಸರಕಾರದಿಂದ ನಿರ್ಲಕ್ಷಿಸಲ್ಪಟ್ಟಿದೆ.ಭಾರತದಲ್ಲಿ ಎಂಟು ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಅದಕ್ಕೆ ಇನ್ನಾದರೂ ನಾವಿನ್ಯತೆ, ಪ್ರಾವಿಣ್ಯತೆ, ದೇಶಿಯತೆ, ಆಧುನಿಕತೆಯ ಸ್ಪರ್ಶ ನೀಡಬೇಕಾಗಿದೆ. ಭವ್ಯ ಭಾರತದ ನಿರ್ಮಾಣದಲ್ಲಿ ಸಮಾಜಕಾರ್ಯ ಶಿಕ್ಷಣ ಮತ್ತು ವೃತ್ತಿಯ ಪಾತ್ರವನ್ನು ಗುರುತಿಸಬೇಕಾಗಿದೆ. ಸಮಾಜಕಾರ್ಯ ಶಿಕ್ಷಣಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ಖುದ್ದು ಸರಕಾರ, ಸಮಾಜಕಾರ್ಯ ಕ್ಷೇತ್ರದ ಪರಿಣತರು, ಸಮಾಜಕಾರ್ಯ ಶಾಲೆಗಳು, ವೃತ್ತಿಪರ ಸಂಘಟನೆಗಳು, ಸಮಾಜಕಾರ್ಯಕರ್ತರು, ಸಮಾಜಕಾರ್ಯ ವಿದ್ಯಾರ್ಥಿಗಳೇ ಮುಂದೆ ನಿಂತು ಪರಿಹರಿಸಬೇಕಿದೆ.


*ಪ್ರಬಂಧದ ಕುರಿತಾದ ಟೀಕೆ, ಟಿಪ್ಪಣಿ, ಸಲಹೆಗಳಿಗೆ ಸದಾ ಸ್ವಾಗತವಿದೆ. 



ಪರಾಮರ್ಶನ ಗ್ರಂಥಗಳು  

1.University Grants Commission, (1965), Social Work Education in Indian  Universities, New Delhi.

2. Nair, Krishnan, (1981), Social Work Education and Social Practice in India, Madras, ASSWI.

3. Singh, R.R (Ed: 1985), Field Work in Social Work Education: A Perspective for Human Service Profession, New Delhi, Concept Publishing Company.

4. Manshardt, Clifford (1985), Education for Social Work: The Indian Journal of Social Work, Vol. XLVI No.1

5. Jacob,K.K, (1994), Social Work Education in India: Retrospect and Prospect, Udaypur, Himamsu Publications.

6. Desai, Murali (1997), Literature on Social Work Profession in India, 1936-1996: An Overview, The Indian Journal of Social Work, 58(2), 149-160.

7. Prasad, Devi, (1997), Literature on Undergraduate Social Work Education, The Indian Journal of Social Work 58(2), 244-264.

8. Nanavathi, Meher, (1997), Professional Associations of Social Work: An Analysis of Literature, The Indian Journal of Social Work, 58 (2), pp-287-300.

9.Srivatsava, S.P, (1999), Addressing the Future of Professional Social Work in India, The Indian Journal of Social Work, 60 (1), pp-118-139.

10. University Grants Commission (2001), UGC Model Curriculum, New Delhi

11. Desai, Murali (2002), Ideologies and Social Work, Jaipur, Rawat Publications.

12. NAAC, (2004), A Manual for Assessment and Accreditation of Social WorkEducation Programme, New Delhi.

13. Devi, Ranjana K (2009), Social Work Education and Action, New Delhi, Omega Publication

14. Thomas, Gracious (Ed: 2010), Professional Social Work in Indian Perspectives, New Delhi, IGNOU.

15. Siddegowda, Y.S, (2010), Educational and Professional Concerns of Social Work Education, The Social Work Journal 2(1), pp-1-8.

16. Thomas, Gracious, (Ed: 2010), Origin and Development of Social Work, New Delhi, IGNOU.

Comments

Popular posts from this blog

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,