Skip to main content

POETRY

💛💜ಬಿಡುವಿದ್ದಾಗ ಗೀಚಿದ ಕವನಗಳು💚💙

*ನಿದ್ರೆಯೇ ಬರದ ಗಳಿಗೆ!!:*
ರೇಷೂ....
ನಿದ್ರೆಯೇ ಬರದ ಗಳಿಗೆ
ನೀನೇ ನನಗೆ ನಿದ್ರೆಯ ಗುಳಿಗೆ!
ನೀನೇ ತಾರೆ ನನ್ನೆಲ್ಲ ಕನಸುಗಳಿಗೆ
ಆವರಿಸಿಹೆ ನನ್ನೆಲ್ಲ ಒಳ-ಹೊರಗೆ!
ನಿನ್ನ ನೆನಪುಗಳಂತೂ ಸವಿಗನಸುಗಳ ಮಳಿಗೆ
ಹೀಗಿರುವಾಗ ನಾ ಜಾರದಿರುವೆನೇ ನಿದ್ರೆಗೆ?
ನಿನ್ನ ಸವಿನೆನಪುಗಳ ಸುಳಿಗೆ, ಗಾಳಿಗೆ!

*ಸೂರ್ಯ!!:*
ಚಂದ್ರನಿಗೆ ಭುವಿಯಂ ಸುತ್ತುವ ಪ್ರೀತಿಯ ತವಕ!
ಭುವಿಗೆ ಸೂರ್ಯನಂ ಸುತ್ತುವ ಪ್ರೀತಿಯ ಧಾವಂತ!!
ಆದರೆ ಇವರಿಬ್ಬರಿಗೂ ಗೊತ್ತಿಲ್ಲ ಸೂರ್ಯನ ಸುಡುವ ಕೋಪ!!!

*ದಡ್ಡ ನನ್ಮಗ ಚಂದಿರ!:*
ಆಕಾಶವೆಂಬೋ ಸುಡುಗಾಡಿನಲ್ಲಿ
ತಂಪಾದ ಚಂದಿರನ ಜೀವಚ್ಛವ ಸುತ್ತುತ್ತಲೇ ಇದೆ, ಭೂಮಿಯ ಪ್ರೀತಿಗಾಗಿ!
ದಡ್ಡ ನನ್ಮಗ!! ಅವನಿಗೇನು ಗೊತ್ತು,
ಭೂಮಿಯ ಜೀವಚ್ಛವ ಸುತ್ತುತ್ತಲೇ ಇದೆ,
ಉರಿಯುವ ಸೂರ್ಯನ ಪ್ರೀತಿಗಾಗಿ!!!

*ಜೀವನಯಾನ!!:*
ಕಾಲು ಒದ್ದೆಯಾಗದೆ ಸಮುದ್ರ ದಾಟಬಹುದು..!
ಆದರೆ  ಕಣ್ಣು ಒದ್ದೆಯಾಗದೆ ಜೀವನ ದಾಟಲಾಗದು....!!
*ಬದುಕೆಂಬ ಕ್ಯಾನ್ವಾಸ್ ಮತ್ತು ಭಾವನೆಗಳೆಂಬ ಬಣ್ಣಗಳು!!:*
ದೇವರು ನಮಗೆಲ್ಲ ಬದುಕು ಎಂಬ ಕ್ಯಾನ್ವಾಸ್ ಮತ್ತು ಭಾವನೆಗಳೆಂಬ ಬಣ್ಣಗಳನ್ನು ಕೊಟ್ಟಿದ್ದಾನೆ. ಯಾವ ಚಿತ್ರವನ್ನು ಬರೆದು, ಯಾವ ಬಣ್ಣವನ್ನು ತುಂಬುತ್ತೀರಿ ಎಂಬುದು ನಿಮಗೆ ಬಿಟ್ಟದ್ದು, ಆದರೆ ಅದು ಆದಷ್ಟು ಸುಂದರವಾಗಿರಲಿ, ಅದಕ್ಕಿಂತ ಹೆಚ್ಚಾಗಿ ಅರ್ಥಪೂರ್ಣವಾಗಿರಲಿ ಅಷ್ಟೇ ‼
*
*ಪ್ರೀತಿ ಮತ್ತು ಮಳೆ...:*
ರೇಷೂ,
ಮುಗಿಲ ಮಳೆಗೂ, ನಿನ್ನಯ ಪ್ರೀತಿಗೂ ಅಂತಹ ವ್ಯತ್ಯಾಸ ಏನಿಲ್ಲ...
ಒಂದು ಕಾರ್ಮೋಡ ಕರಗಿಸಿದರೆ,
ಇನ್ನೊಂದು ನನ್ನಂತವನ ಕಟು ಹೃದಯ ಕರಗಿಸಿದೆ. ..!

*ಭುವಿ-ಸೂರ್ಯ...!!:*
ಭುವಿಯ ಬೆಡಗು-ಬಿನ್ನಾಣಗಳಿಗೆ ಮನಸೋತು
ದಡ್ಡ ಚಂದಿರ ಚೆಲ್ಲಿದ ಬೆಳ್ದಿಂಗಳನ್ನ..
ಚಾಲಾಕಿ ಚುಕ್ಕಿಗಳು ಮಿಟುಕಿಸಿದವು ಕಂಗಳನ್ನ..
ಕರಿಮೇಘ ಸುರಿಸಿದ ಮುತ್ತಿನ ಮಳೆಯನ್ನ..
ಆದರೆ ಭುವಿ ಮಾತ್ರ ಮೆಚ್ಚಿದಳು ಉರಿಯುವ ಸೂರ್ಯನನ್ನ..

*ಗ್ರಹಣ!!:*
ಭುವಿ ಮತ್ತು ರವಿಯ ಪ್ರೀತಿಯ ನಡುವೆ ಶಶಿ  ಬಂದಾಗ ರವಿಗೆ ಗ್ರಹಣ..
ಸಿಟ್ಟಿಗೆದ್ದ ಭುವಿ ಶಶಿಯನ್ನಾಚೆ ನೂಕಿ ರವಿಯೆಡೆಗೆ ಬಂದಾಗ ಚಂದ್ರನಿಗೆ ಗ್ರಹಣ..!!

*ಉಸಿರಿಗೆ ಉಸಿರಾಗು!!:*
ಏ ಹುಡ್ಗೀ..
ಕೈಯಲ್ಲಿ ಕೈಯಿಡು
ನನ್ನಿನ್ನ ಬೆರಳುಗಳ ಬಂಧನವಾಗಲಿ..!
ತುಟಿಗೆ ತುಟಿಯಿಡು
ಮುತ್ತಿನ ಸುರಿಮಳೆಯಾಗಲಿ..!
ಬಾಚಿ ಬಿಗಿದಪ್ಪು
ದೇಹಕ್ಕೆ-ದೇಹ ಹೊಸೆಯಲಿ..!
ಉಸಿರಿಗೆ-ಉಸಿರಾಗು
ನನ್ನಿನ್ನ ಜೀವ ಒಂದಾಗಲಿ..!

*ಸಿಹಿಮುತ್ತುಗಳ ಬಡ್ಡಿ!!:*
ಏ ಹುಡುಗಿ ಜೀವನ ಪರ್ಯಂತ
ಪ್ರೀತಿಯನ್ನ ಸಾಲ ಕೊಡುತ್ತಿಯೇನೆ?
ಬಡ್ಡಿಯ ಸಮೇತ ಅಸಲು ಚುಕ್ತಾ ಮಾಡುವೆ
ಪುಗ್ಸಟ್ಟೆಯೇನು ಬೇಡ
ದಿನಕ್ಕೆ ಬೇಕಾದ್ರೆ ನೂರಾರು ಸಿಹಿಮುತ್ತುಗಳ ಬಡ್ಡಿ ಕಟ್ಟುವೆ..!

*ಕೈಕೊಟ್ಟ ಹುಡುಗಿಗೆ.... !!:*
ಮುಂಜಾವಿನ ಮಂಜಲ್ಲಿ
ನಡೆಯುತ್ತಿದ್ದೆ ನಿನ್ಜೊತೆ,
ನನ್ನ ಕಣ್ಣ ಹನಿಗಳು
ಕಾಣಿಸಲಿಲ್ಲ ನಿನಗೆ...
ನಡು ಹಗಲಿನ ಉರಿ ಬಿಸಿಲಲ್ಲಿ
ನಡೆಯುತ್ತಿದ್ದೆ ನಿನ್ಜೊತೆ,
ನನ್ನ ನೋವುಗಳ ಬೇಗೆ
ಅರ್ಥವಾಗಲಿಲ್ಲ ನಿನಗೆ...
ಇಳಿಸಂಜೆಯ ತಂಪೊತ್ತಿನಲ್ಲಿ
ನಡೆಯುತ್ತಿದ್ದೆ ನಿನ್ಜೊತೆ,
ನನ್ನ ಭಾವನೆಗಳು ಹೇಗೆ
ಅರ್ಥವಾಗಲಿಲ್ಲ ನಿನಗೆ...?
ಕಾರ್ಗತ್ತಲ ಇರುಳಿನಲ್ಲೂ
ನಡೆಯುತ್ತಿದ್ದೆ ನಿನ್ಜೊತೆ,
ನನ್ನ ಬದುಕಿಗೆ
ನೀನು ಬೆಳಕಾಗಲಿಲ್ಲ ಕೊನೆಗೆ!!

*ಡೆಮಾಕ್ರಸಿ 🙅:*
ಕೊಟ್ಟ ಐದು ವರುಷಗಳಲೀ
ದಿಟ್ಟ ಆಳ್ವಿಕೆ ಮಾಡದೇ
ಮತ್ತೈದು ವರುಷ ಕೊಡಿ
ಉದ್ಧರಿಸುವೆನು ಎನ್ನುವವನು
ವೀರನೂ ಅಲ್ಲ, ಧೀರನೂ ಅಲ್ಲ...!

*ನನಗೂ ಸಂವೇದನೆಯಿದೆ!!:*
ನಲ್ಲೆ,ನನಗೂ ಸಂವೇದನೆಯಿದೆ
ಮುಂಜಾವಿನ ಇಬ್ಬನಿಯಲೂ
ನಿನ್ನ ಸಂತಸಭಾಷ್ಪ ಮುತ್ತುಗಳ ಎಣಿಸಬಲ್ಲೆ!
ನಲ್ಲೆ,ನನಗೂ ಸಂವೇದನೆಯಿದೆ
ಬಿರು ಬಿಸಲಿನಲೂ
ನಿನ್ನೆದೆಯ ಪ್ರೀತಿ, ಬೇಗುದಿಯ ಅರಿಯಬಲ್ಲೆ!
ನಲ್ಲೆ ನನಗೂ ಸಂವೇದನೆಯಿದೆ
ಇಳಿಸಂಜೆಯ ಸುಳಿಗಾಳಿಯಲೂ
ನೀನ್ ಪಿಸುಗುಡುವ ಸವಿಸದ್ದು ಕೇಳಬಲ್ಲೆ!
ನಲ್ಲೆ, ನನ್ನೊಳಗೂ ಸಂವೇದನೆಯಿದೆ
ಕಗ್ಗತ್ತಲ ಇರುಳಿನಲೂ
ನಿನ್ನ ನಗು ಮೊಗವ ನೋಡಬಲ್ಲೆ!

*ಸಹ್ಯಾದ್ರಿಯ ಮಡಿಲಲ್ಲಿ...!!:*
ಅದೋ ಅಲ್ನೋಡಿ ಅದೇ ನನ್ನೂರು!
ಸಹ್ಯಾದ್ರಿಯ ಮಡಿಲಲ್ಲಿ,
ಮಲಪ್ರಭೆಯ ಬದಿಯಲ್ಲಿ||ಪ||
ಆಹಾ ಜಂಬೂ ನೇರಳೆ
ಹುಳಿ-ಸಿಹಿಯ ಕವಳೆ
ಹುಳಿ-ಒಗರಿನ ನೆಲ್ಲಿ
ಮಾವು, ಹಲಸು, ಪೇರಲ, ಅಲ್ಲಲ್ಲಿ||೧||
ಕನ್ನಡ ಕೋಗಿಲೆಯ ಕಲರವ
ಹುಲಿಯ ಘರ್ಜನೆ
ಆನೆಯ ಓಂಕಾರ
ಮಣ್ಣ ಕಣ ಕಣದಲ್ಲೂ ನಿಸರ್ಗ ಝೇಂಕಾರ||೨||
ಮುಂಜಾನೆಯ ಇಬ್ಬನಿ
ನಡು ಹಗಲಿನ ಸುಳಿಗಾಳಿ
ಇಳಿಸಂಜೆಯ ಗೋಧೂಳಿ
ಸುಂದರ ಕಾಡ ಹೂಗಳ ಓಕುಳಿ||೩||
ಹಿತ ಹವೆಯ ಬೇಸಿಗೆ
ಧಾರಾಕಾರ ಮಳೆಗಾಲ
ಥರಗುಟ್ಟಿಸುವ ಚಳಿಗಾಲ
ಸಕಲ ಜೀವಾತ್ಮರಿಗೂ ಉಳಿಗಾಲ||೪||

*ನಾಯಿ ಕಾಯುವವರು!!:*
ಕೆಲವರು
ದನ ಕಾಯುತ್ತಾರೆ
ಹಳ್ಳಿಕಡೆ
ಜೀವನೋಪಾಯಕ್ಕೆ...!
ಹಲವರು
ನಾಯಿ ಕಾಯುತ್ತಾರೆ
ನಗರದೆಡೆ
ಬೊಜ್ಜು ಕರಗಿಸಲಿಕ್ಕೆ...!!

*ಇದ್ದಾಗ ಅರಿವಾಗುವುದಿಲ್ಲ..! 😕:*
ನಮ್ಮವರ ಬೆಲೆ
ನಮ್ಮ ಜೊತೆ ಇದ್ದಾಗ ಅರಿವಾಗುವುದಿಲ್ಲ||ಪ||
ಸಣ್ಣ ವಿಷಯಕ್ಕೆ ಸಿಡುಕುತ್ತೇವೆ
ದೊಡ್ಡ ವಿಷಯಕ್ಕೆ ನಿರ್ಲಕ್ಷ್ಯಿಸುತ್ತೇವೆ
ಬೈಯ್ಯುತ್ತೇವೆ, ಗೋಳು ಹೊಯ್ಯುತ್ತೇವೆ||೧||
ಅವಮಾನಿಸುತ್ತೇವೆ
ಅನುಮಾನಿಸುತ್ತೇವೆ
ಅಂತರವನ್ನೂ ಕಾಯುತ್ತೇವೆ||೨||
ಮಾತು ಬಿಡುತ್ತೇವೆ
ದೂರ ಇರುತ್ತೇವೆ
ಮುಖ ಸಿಂಡರಿಸಿಕೊಂಡು ಹೋಗುತ್ತೇವೆ||೩||
ಕೊನೆಗೊಂದು ದಿನ
ನಮ್ಮವರು ಬಾರದ ಲೋಕಕ್ಕೆ ಸಾಗುತ್ತಾರೆ
ಹುಡುಕುತ್ತೇವೆ, ಹುಡುಕುತ್ತೇವೆ ಸಿಗುವುದೇ ಇಲ್ಲ||೪||

*ಅದೃಷ್ಟ..!! 💕:*
ಕೆಂದುಟಿಗಳ ನಡುವೆ
ಫಳ ಫಳನೇ ಹೊಳೆದು
ಕಣ್ಹೊಡೆಯುವ ಬೆಳ್ಳನೆಯ ದಂತ ಪಂಕ್ತಿಗಳು! 💚
ಬೇಡವೆಂದರೂ ನಿನ್ನ
ಗುಳಿಕೆನ್ನೆಯ ಬಿಡದೇ
ಚುಂಬಿಸುವ ತುಂಟ ಮುಂಗುರುಳು! 💛
ಸಂಪಿಗೆಯ ಮೂಗನ್ನು
ಅಪ್ಪಿಕೊಂಡು
ಪಪ್ಪಿ ಕೊಡುವ ಮೂಗನತ್ತು! 💜
ನಿನ್ನೀಳ ಕಾಲುಗಳನ್ನು
ಅಪ್ಪಿಕೊಂಡು
ಕುಲುಕಿದಾಗ
ಝಲ್ಲೆನುವ ಗೆಜ್ಜೆಗಳು! 💙
ಇವೆಲ್ಲವೂಗಳಿಗಿರುವ ಅದೃಷ್ಟ ನನಗಿದೆಯೇ ಪ್ರಿಯೇ..!!? 💖

ಆಹಾ! ಸವಿಗನ್ನಡ!!:*
ಮನದ ಮಾತು
ತನುವಿನ ನೆತ್ತರು
ಹೃದಯದ ಬಡಿತ
ಬದುಕಿನ ತುಡಿತ!!
ವೀರರ ಜನನ
ರತ್ನತ್ರಯರ ಕಾವ್ಯನ
ಶರಣರ ವಚನ
ದಾಸರ ಕೀರ್ತನ!!
ಜ್ಞಾನ ಕಣಜ
ಕಲಿಕೆ ಸಹಜ
ಸಿರಿ ಸಾಹಿತ್ಯ
ಆಡಳಿತಕ್ಕೂ ಅಗತ್ಯ!!
ವಿಜ್ಞಾನ
ತಂತ್ರಜ್ಞಾನ
ಜಾಲತಾಣ
ಆಧುನಿಕ ರಿಂಗಣ!!
ಹಳೆಗನ್ನಡ
ನಡುಗನ್ನಡ
ಹೊಸಗನ್ನಡ
ಆಹಾ! ಸವಿಗನ್ನಡ!!
ಆಹಾ! ಸವಿಗನ್ನಡ!!


Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,