Skip to main content

ಮಳೆಗಾಲ, ಗೌಳಿಗರು, ವ್ಯವಸ್ಥೆ ಮತ್ತು ರಕ್ತ ಹೀರುವ ಜಿಗಳೆಗಳು!


ಕಳೆದ ಐದಾರು ವರುಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಅದಾಗ್ಯೂ ಕರುನಾಡಿನ ಬೇರೆ ಭೌಗೋಳಿಕ ವಿಭಾಗಗಳಿಗೆ ಹೋಲಿಸಿ ನೋಡಿದರೆ ಪಶ್ಚಿಮಘಟ್ಟಗಳಲ್ಲಿ ಜನಜೀವನಕ್ಕೆ ಸಾಗುವಷ್ಟಾದರೂ ಮಳೆ ಆಗಿಯೇ ತೀರುತ್ತದೆ.ಅದರ ಜೊತೆ ಜೊತೆಗೆ ನಾಡಿನ ವಿವಿಧ ಭಾಗಗಳಿಗೆ ಇಲ್ಲಿ ಹುಟ್ಟುವ ನದಿಗಳೇ ಜೀವನಾಧಾರ ಎಂಬುದರಲ್ಲಿ ಎರಡು ಮಾತಿಲ್ಲ. ಕಾರಣದಿಂದ ಮಲೆನಾಡಿಗರಲ್ಲಿ ಏನಿಲ್ಲದಿದ್ದರೂ ಕಾರಣಕ್ಕಾಗಿ ಒಂದು ಹೆಮ್ಮೆಯಂತೂ ಇದ್ದೆ ಇದೆ

ಮುಂಗಾರು ಆರಂಭದ ಸೂಚನೆ ದೊರೆತಂತೆ ಭಾಗದಲ್ಲಿ ಕೃಷಿ ಚಟುವಟಿಕೆಗಳು ಬಿಡುವಿಲ್ಲದಂತೆ ನಡೆಯತೊಡಗಿ ಊರುಗಳು ಖಾಲಿ ಹೊಡೆಯುವುದು ಸಾಮಾನ್ಯ. ಭೀಮಘಢ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಭತ್ತವನ್ನೇ ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ಕಬ್ಬು, ಶೆಂಗಾ ಇತ್ಯಾದಿ.

ಮಳೆಗಾಲದ ದಿನಗಳೆಂದರೆ ರೈತರಿಗಷ್ಟೆ ಅಲ್ಲ ನಮಗೂ ಹಬ್ಬವಾಗಿತ್ತು.ಉಳಿದ ದಿನಗಳಿಗೆ ಹೋಲಿಸಿದರೆ ಮಳೆಗಾಲದ ದಿನಗಳಲ್ಲಿ ಶಾಲೆಯ ನಿಯಮಗಳಲ್ಲಿ ನಮ್ಯತೆ ಇರುತ್ತಿತ್ತು.  ಪಾಠ ಪ್ರವಚನಗಳಿಗಿಂತ ಹೆಚ್ಚಾಗಿ ಮೇಷ್ಟ್ರು  ಪಂಚತಂತ್ರದ ಕಥೆಗಳನ್ನೇ ಹೇಳುತ್ತಿದ್ದರು. ನಮ್ಮ ಶಾಲೆಯ ವಿಶಾಲ ಮತ್ತು ಸಮತಟ್ಟು ಮೈದಾನ ಮಳೆಯ ಹೊಡೆತಕ್ಕೆ ಸಿಕ್ಕು ಪಾಚಿಗಟ್ಟುತ್ತಿತ್ತು. ಓಡಾಡುವಾಗಷ್ಟೇ ಅಲ್ಲ ಪಾದಗಳನ್ನು ಬಿಗಿ ಹಿಡಿದು ಅತ್ಯಂತ ಜಾಗರೂಕವಾಗಿ ನಡೆದರೂ, ಮಳೆಗಾಲದ ಒಂದು ದಿನವಾದರೂ    ರಾಡಿಯಲ್ಲಿ  ಜಾರಿ ಬಿದ್ದೆ ಬೀಳುತ್ತಿದ್ದೆವು.

ಪ್ಯಾರಾಗಾನ್ ಚಪ್ಪಲಿ ಹಾಕಿಕೊಂಡು ಶಾಲೆಗೆ ಬರುತ್ತಿದ್ದವರಂತೂ ಯಾವಾಗಲೂ ಪ್ರಜ್ಞಾವಸ್ಥೆಯಲ್ಲಿಯೇ  ಇರಬೇಕಾಗಿತ್ತು.ಒಂದನೇ ತರಗತಿ ಮಗುವನ್ನೆನಾದರೂ ನೀವು ಒಂಟಿಯಾಗಿ ಕೊಡೆಯನ್ನು ಕೊಟ್ಟು ಕಳಿಸಿದರೆ ಗಾಳಿಯ ಹೊಡೆತಕ್ಕೆ ಸಿಕ್ಕು ಕೊಡೆಯ ಜೊತೆಗೆ ಮಗುವು ಹಾರಿಹೋಗುವಷ್ಟು ಭಯಾನಕ ಗಾಳಿಯೂ ಮಳೆಗಾಲದ ಅವಿಭಾಜ್ಯ  ಅಂಗವೇ ಆಗಿತ್ತು. ನೆಗಡಿ, ಕೆಮ್ಮು,,ಜ್ವರ ಮಳೆಗಾಲದ ಅತಿಥಿಗಳಾಗಿದ್ದವು.

ಶನಿವಾರ ಮತ್ತು ರವಿವಾರ ರಜೆಯ ಹಗಲುಗಳು ಹಳ್ಳ ಕೊಳ್ಳ ಸುತ್ತುವದರಲ್ಲಿಯೇ ಕಳೆದು ಹೋಗುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆ ನೆಲದಿಂದ ಪುಟಿಯುತ್ತಿದ್ದ ಸ್ವಚ್ಛ ನೀರ ಝರಿಗಳು ನಮಗೆ ಅಚ್ಚರಿಯ ಕೇಂದ್ರಬಿಂದುಗಳಾಗಿದ್ದವು. ಈಗ ಪ್ರಸ್ತುತ  ಚರ್ಚೆಯಲ್ಲಿರುವ ಮಹಾದಾಯಿ ನದಿಯ ಉಪನದಿ, ನಮ್ಮೂರಿನಿಂದ ಕೆಲವೇ ಕಿಮೀ ಅಂತರದಲ್ಲಿದ್ದ ಬಂಡೂರಿ ನಮಗಂತೂ ರೋಚಕವಾಗಿ ಕಾಡುತ್ತಿತ್ತು. ಬೇಸಿಗೆಯಲ್ಲೂ ನಿರಂತರವಾಗಿ, ನಿಷ್ಕಲ್ಮಷವಾಗಿ,ತಂಪಾಗಿ ಹರಿಯುತ್ತಿರುವ ನದಿ ಭಾಗದ ಕಾಡನ್ನು ಹಚ್ಚ ಹಸಿರಾಗಿರಿಸಿದೆ ಮತ್ತು ಕಾಡು ಪ್ರಾಣಿಗಳ ದಾಹವನ್ನು ಇಂಗಿಸುತ್ತಿದೆ. ತನ್ನ ಮಡಿಲಲ್ಲಿ ವಿವಿಧ ಜಾತಿಯ ಮೀನು, ಹಾವು, ಏಡಿ, ಆಮೆಗಳನ್ನಿಟ್ಟುಕೊಂಡು ಪೊರೆಯುತ್ತಿದೆ.

ನದಿಗೆ ವರುಷದ ಹಲವು ಸಲ ನಾವು ಬೇಟಿಕೊಡುತ್ತಿದ್ದುದು ಸಾಮಾನ್ಯವೇ ಆಗಿತ್ತು. ಈಜಿಗಾಗಿಯೋ, ಏಡಿಗಾಗಿಯೋ, ಹೋಳಿಯ ನಂತರದ ಜಳಕಕ್ಕಾಗಿಯೋ, ಮಹಾನವಮಿಯ ಮುನ್ನ ಹಾಸಿಗೆ-ಹೊದಿಕೆಗಳನ್ನು ಒಗೆಯುವುದಕ್ಕೊ, ಗೌಳಿಗರು ಬಿಡಿಸಿದ ಜೇನಿನ ತುಪ್ಪ ತರುವುದಕ್ಕೊ ಹೀಗೆ ಹಲವು ಕಾರಣಗಳು. ನಿತ್ಯ ಹರಿದ್ವರ್ಣಗಳಲ್ಲಿ ಇಂದಿಗೂ ಗೌಳಿಗರೇ ಪ್ರೀತಿಯಿಂದ ಶಾಂತವಾಗಿ ನೆಮ್ಮದಿಯಿಂದ ವಾಸಿಸುತ್ತಿದ್ದಾರೆ

ಪಶುಪಾಲನೆ, ಕೃಷಿ ಇವರ ಪ್ರಮುಖ ಜೀವನೋಪಾಯಗಳು.ಕಳೆದ ಎರಡು ಪೀಳಿಗೆಗಳು ಇವುಗಳಲ್ಲಿ ಆಸಕ್ತಿ  ಕಳೆದುಕೊಂಡು ಈಗ ಮಹಾರಾಷ್ಟ್ರದಲ್ಲಿ ಗೌಂಡಿ-ಮೇಸ್ತ್ರೀಗಳಾಗಿ ಕಷ್ಟಪಟ್ಟು ಕೆಲಸಮಾಡುತ್ತ ಕೈ ತುಂಬಾ ಹಣ ಸಂಪಾದಿಸಿ ಆರ್ಥಿಕವಾಗಿ ಪ್ರಬಲವಾಗಿ ಬೆಳೆಯತ್ತಿದ್ದರೂ ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳಿದಿಲ್ಲದಿರುವುದರಿಂದ ಸದಾ ಲಂಚಗುಳಿ ಅಧಿಕಾರಶಾಹಿಗಳಿಂದ ತಮಗರಿವಿಲ್ಲದಂತೆ ಶೋಷಣೆಗೆ ಒಳಗಾಗುತ್ತಿದ್ದಾರೆ.

ಪಡಿತರ ಚೀಟಿ, ವೋಟರ್ ಐಡಿ, ಪ್ರ ಪತ್ರಗಳನ್ನು ಪಡೆಯುವ ವಿಧಾನ, ತಮ್ಮ ಹಕ್ಕುಗಳ ಅರಿವು ಇವ್ಯಾವೂ ಇಲ್ಲದ ಮುಗ್ಧರಾದ ಇವರಿಂದ ಇವುಗಳನ್ನು ಒದಗಿಸುವವರು ಹಣಕೀಳುತ್ತಿದ್ದಾರೆ. ಭಾಗದ ಗೌಳಿಗರು ಉಳಿದ ಭಾಗಗಳಿಗೆ ಹೋಲಿಸಿ ನೋಡಿದರೆ ನಿರಕ್ಷರಿಗಳು ಮತ್ತು ತೀರಾ ಮುಗ್ಧರು. ಇಲ್ಲಿಯವರೆಗೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬಲ್ಲ ಪ್ರಬಲ ನಾಯಕತ್ವವೇ ಬೆಳೆದಿಲ್ಲ. ಇಲ್ಲಿಯವರೆಗೂ ಇವರು ವಾಸಿಸುವ ಜಾಗಗಳಿಗೆ ಸರಕಾರಿ ಬಸ್ಸು ಬಿಡಿ, ಸರಿಯಾದ ರಸ್ತೆಯೂ ಇಲ್ಲ, ನಿರಂತರ ವಿದ್ಯುತ್ ಇಲ್ಲ, ಮೊಬೈಲ್ ನೆಟ್ವರ್ಕ ಇಲ್ಲ, ಆಸ್ಪತ್ರೆ ಇಲ್ಲ ತೀರಾ ಮಳೆಯಾದರೆ ಹೊರಜಗತ್ತಿನ ಸಂಪರ್ಕವೇ ಇಲ್ಲ.ಅದಾಗ್ಯೂ ಇವರಿಗೆ ಅದ್ಯಾವ ನೋವುಗಳೂ ಬಾಧಿಸುವುದಿಲ್ಲ, ತಾವು ಸಮಸ್ಯೆಗಳೊಂದಿಗೆ, ವ್ಯವಸ್ಥೆ ಯಿಂದ ಶೋಷಿತರಾಗಿ ಬದುಕುತ್ತಿದ್ದೆವೆಂಬ ಅರಿವೂ ಜನರಿಗಾಗಿಲ್ಲ.

ಅನಕ್ಷರತೆ ಅದ್ಯಾವ ಪರಿ ಬುದ್ಧಿಯ ಮೇಲೆ ಮಂಕುಬೂದಿ ಎರಚುತ್ತದೆ ಎಂಬುದಕ್ಕೆ ಇಷ್ಟು ಉದಾಹರಣೆಗಳು ಸಾಕು.  15 ರೂಪಾಯಿ ಶುಲ್ಕದ  ಪ್ರಪತ್ರವನ್ನು, ಇವರ ವೇಷಭೂಷಣ ಕಂಡು, 'ಗೌಳಿಗ' ರು ಎಂದು ಗೊತ್ತಾದ ಕೂಡಲೇ ಲಂಚಬಾಕ ಅಧಿಕಾರಿಗಳು  ಅದರ ಮೊತ್ತವನ್ನು ಅನಧೀಕೃತ ವಾಗಿ 50ರಿಂದ 100ರವರೆಗೆ ಅಥವಾ ಅದಕ್ಕಿಂತ ಹೆಚ್ಚು ಮಾಡಿ ಹಣ ಕೀಳುವುದನ್ನು ಅಸಹಾಯಕವಾಗಿ ನೋಡಿದ್ದೇನೆ.ಇಂದಿನ ಪೀಳಿಗೆ ಕಿರಿಯ ಪ್ರಾಥಮಿಕ ಶಾಲೆಯವರೆಗಾದರೂ ಸರಿಯಾಗಿ ಕಲಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ  ಆದರೆ ಭವಿಷ್ಯದ ಕನಸು ಮಾತ್ರ ಗೌಂಡಿ-ಮೇಸ್ತ್ರೀಯೇ ಆಗಿರುತ್ತದೆ. ಎಲೆ- ಅಡಿಕೆ-ತಂಬಾಕು ಹೇರಳವಾಗಿ ಪೌಷ್ಟಿಕ ಆಹಾರವೆಂಬಂತೆ ಬಳಸುತ್ತಾರೆ.

ಅದಾಗ್ಯೂ ಹೇಳ್ತೇನೆ ಇವರದು ನಿಷ್ಕಪಟ, ಪ್ರಾಮಾಣಿಕ ಜೀವನ. ಮಳೆಯಿಂದ ರಕ್ಷಣೆ  ಪಡೆಯುವ ಸಲುವಾಗಿ ಕಂಬಳಿ ಮತ್ತದರ ಮೇಲೆ ಪ್ಲಾಸ್ಟಿಕ್ ಕಾಗದವನ್ನುಬಳಸಿ ಹೊದ್ದುಕೊಂಡು ಓಡಾಡುತ್ತಾರೆ. ಗಿಡಗಳ ಮೇಲೆ ಅಟ್ಟಣಿಗೆ ಮಾಡಿ ಬೆಳೆ ಕಾಯುತ್ತಾರೆ. ಜೇನು ಬಿಡಿಸಿ ತುಪ್ಪ ಮಾರುತ್ತಾರೆ. ಕೈಕಾಲು ಮುರಿದವರಿಗೆ ಬಿದಿರಿನ ಕಡ್ಡಿಯ ದಬ್ಬೆ ಕಟ್ಟಿ ಗಾಂವಟಿ ಗಿಡಮೂಲಿಕೆ ಔಷಧ ನೀಡುತ್ತಾರೆ. ಹೇರಳವಾಗಿ ಮೀನುಗಳನ್ನು, ಸಾರಾಯಿಯನ್ನು ಇಷ್ಟಪಟ್ಟು ಸೇವಿಸುತ್ತಾರೆ. ಅದ್ಭುತ ವಾದ ರೋಗ ನಿರೋಧಕ ಶಕ್ತಿಯನ್ನು ಅವರು ವಾಸಿಸುವ ಪ್ರದೇಶ ಮತ್ತು ಸೇವಿಸುವ ಆಹಾರ ಅವರಿಗೆ ನೀಡಿದೆ. ಸಾಕಷ್ಟು ದನಕರುಗಳನ್ನು ಹೊಂದಿರುವ ಇವರು ಸುತ್ತ ಮುತ್ತಲಿನ ಮರಾಠರ ಡೈರಿಗಳಿಗೆ ಹಾಲು ಹಾಕುತ್ತಾರೆ. ತುರ್ತಿಗಾಗಿ ಮನೆಗೆ ಒಂದೊಂದು ಬೈಕ್ಗಳಿವೆ.

ಮಳೆಗಾಲದಲ್ಲಿ ಇವರ ಜಾನುವಾರುಗಳನ್ನು ಕಾಡು ನೊಣಗಳು ಹೈರಾಣಾಗಿಸಿದರೆ.ಜಿಗಳೆಗಳು ಇವರ ರಕ್ತದ ರುಚಿ ನೋಡದೆ ಬಿಡುವುದಿಲ್ಲ. ಕಾರಣಕ್ಕಾಗಿ ಇವರಿಗೆ ಸುಲಭವಾದ ಪರಿಹಾರಗಳು ತಿಳಿದಿವೆ. (1.ಉದ್ದವಾದ ಬೂಟು ಧರಿಸುವುದು2.ಜಿಗಳೆಗಳು ಹತ್ತಿದಾಗ ಬಿಡಿಸಲು ಸುಣ್ಣ ತಂಬಾಕಿನ ಮಿಶ್ರಣ ಹಚ್ಚುವುದು). ಬಹಳ ವಿಚಿತ್ರ ಎಂದರೆ ಜಿಗಳೆಗಳು ಹತ್ತಿದ್ದಾಗಲೀ, ರಕ್ತ ಹೀರುತ್ತಿರುವುದಾಗಲೀ ನಮ್ಮ ಸ್ಪರ್ಶ ಜ್ಞಾನೇಂದ್ರೀಯವಾದ ಚರ್ಮಕ್ಕೆ ಅರಿವಾಗುವುದಿಲ್ಲ. ಅದರ ಅರಿವಾಗುವುದು ಜಿಗಳೆ, ಸಾಕಷ್ಟು ರಕ್ತ ಹೀರಿ ಉದುರಿದ ನಂತರ ಶುರುವಾಗುವ ಸಣ್ಣ ಕೆರೆತಕ್ಕೆ. ಇಲ್ಲದಿದ್ದರೆ ನಾವೇ ಕೈ ಕಾಲುಗಳನ್ನು ಆಗಾಗ ಪರೀಶೀಲಿಸುತ್ತಿರಬೇಕಷ್ಟೇ.

ಕೀವು ಕುರುಗಳಾದ ಜಾಗದಲ್ಲಿ ಜಿಗಳೆಗಳನ್ನು ಬಿಟ್ಟು ಅಶುದ್ಧ ರಕ್ತವನ್ನು ಹೀರಿಸುವ ಚಿಕಿತ್ಸೆಯ ಬಗ್ಗೆ ಕೇಳಿದ್ದೇನೆ. ಅದೇನೇ ಇರಲಿ ಗೌಳಿಗರಿಗೆ ರಕ್ತಹೀರುವ ವ್ಯವಸ್ಥೆಗಿಂತ, ಜಿಗಳೆಗಳ ಕಾಟ ಏನೂ ಅಲ್ಲ. ಜಿಗಳೆಗಳು ಸ್ರವಿಸುವ ಅಮಲಿನ ಕಿಣ್ವದಿಂದ ಹೇಗೆ ರಕ್ತ ಹೀರುತ್ತಿರುವ ಅರಿವು ಸ್ವತಃ  ಕಣ್ತೆರೆದು ನೋಡುವವರೆಗೆ ಉಂಟಾಗುವುದಿಲ್ಲವೋ ಹಾಗೇ ಗೌಳಿಗರು ಶಿಕ್ಷಣ ಪಡೆಯುವ ತನಕ ಅಧಿಕಾರಶಾಹಿ ಜಿಗಳೆಗಳು ಲಂಚದ ರೂಪದಲ್ಲಿ ಹೀರುತ್ತಿರುವ ರಕ್ತದ ಅರಿವೂ ಉಂಟಾಗುವುದಿಲ್ಲ!!

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,