Skip to main content

'ಕನ್ನಡದ ಕಸ್ತೂರಿ,ಹೊಸಗನ್ನಡದ ಬೆಳ್ಳಿಚುಕ್ಕಿ-ಮುದ್ದಣ'(24 ಜನೇವರಿ 1870ರಿಂದ 1901)

ಸಾಹಿತ್ಯವೇ ಜೀವನ ಎಂಬಂತೆ ಬದುಕಿದ, ಸಾಹಿತ್ಯಕ್ಕಾಗಿ ಈ ಶರೀರ ಎಂಬಂತೆ ಬಾಳಿದ, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಪ್ರಾಚೀನತೆ-ಆಧುನಿಕತೆಗಳ ಸೇತುವೆಯೆಂದೂ, ಹೊಸಗನ್ನಡದ ಬೆಳ್ಳಿಚುಕ್ಕಿ, ನವೋದಯದ ಮುಂಗೋಳಿ,  ಹೊಸಗನ್ನಡದ ಕಾವ್ಯೋದ್ಯಾನದಲ್ಲಿ ಮೊದಲು ಕೂಗಿದ ಕೋಗಿಲೆಯೆಂದು ಕೊಂಡಾಡಲ್ಪಟ್ಟ ಕನ್ನಡಿಗರ ಹೆಮ್ಮೆಯ ಕವಿ "ಮುದ್ದಣ" ಎಂಬ ಮುದ್ದಾದ ಕಾವ್ಯನಾಮದಿಂದಲೇ ಪರಿಚಿತನಾದ ನಂದಳಿಕೆ ಲಕ್ಷ್ಮೀ ನಾರಾಯಣನ ಬಗ್ಗೆ ಬರೆಯಲು ಅತೀವವಾದ ಹೆಮ್ಮೆ ಎನಿಸುತ್ತದೆ.

 24ನೇ ಜನೇವರಿ 1870 ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಂದಳಿಕೆಯಲ್ಲಿ ಮುದ್ದಣ ಜನಿಸಿದ.  ತಂದೆ ತಮ್ಮಯ್ಯ, ತಾಯಿ ಮಹಾಲಕ್ಷ್ಮೀ, ತುಂಬ ಬಡಕುಟುಂಬ. ಮುದ್ದಣನ ನಿಜನಾಮ ಲಕ್ಷ್ಮೀನಾರಾಯಣ , ಬಾಲ್ಯದಲ್ಲಿ ಮುದ್ದಿನಿಂದ ಮುದ್ದಣ ಎಂದೇ ಕರೆಯುತ್ತಿದ್ದರು. ಬಾಲ್ಯದಲ್ಲಿ ಆತನಿಗೆ ಯಕ್ಷಗಾನ, ಹರಿಕಥೆ, ಸಂಗೀತಗಳಲ್ಲಿ ಅತೀಯಾದ ಪ್ರೀತಿ. ಇವೆಲ್ಲ ಅತೀರೇಖಗಳಿಂದ ತಂದೆಯಿಂದ ಏಟುಗಳನ್ನೂ ತಿನ್ನುತ್ತಿದ್ದ.

ಇವೆಲ್ಲ ಆಸಕ್ತಿಗಳೊಂದಿಗೆ ಓದಿನಲ್ಲೂ ಮುಂದಿದ್ದ. ಕಿತ್ತು ತಿನ್ನುವ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ಬಿಟ್ಟ. ಅಂದು ಮುಂದಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೋಗಬೇಕಿತ್ತು, ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಕುಟುಂಬಕ್ಕೆ ಆಸಕ್ತಿಯಾಗಲಿ ಆ ಶಕ್ತಿಯಾಗಲಿ ಇರಲಿಲ್ಲ. ಕೆಲ ದಿನ ಕೂಲಿ ಕೆಲಸ ಮಾಡಿದ ಆತನಲ್ಲಿ ಮತ್ತೇ ಕಲಿಯಬೇಕೆಂಬ ಆಸೆ ಚಿಗುರಿದಾಗ ಶಿಕ್ಷಕ ತರಬೇತಿ ಪಡೆಯಲು ಕನ್ನಡ ಟ್ರೈನಿಂಗ ಶಾಲೆಗೆ ಸೇರಿದ. ಎರಡು ವರ್ಷಗಳ ಈ ತರಬೇತಿಯಲ್ಲಿ ಶಿಷ್ಯವೇತನ ನೀಡಲಾಗುತ್ತಿತ್ತು. ತರಬೇತಿಯ ನಂತರ ಶಿಕ್ಷಕ ಉದ್ಯೋಗ ದೊರೆಯದ ಕಾರಣ ಮದ್ರಾಸ್ನಲ್ಲಿ ದೈಹಿಕ ಶಿಕ್ಷಕ ಶಿಕ್ಷಣ ತರಬೇತಿ ಪಡೆದ. ಇದರ ಆಧಾರದ ಮೇಲೆಯೇ ಉಡುಪಿಯ ಬೋರ್ಡ ಮಿಡ್ಲ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕನಾಗಿ ಕೆಲಸ ಗಿಟ್ಟಿಸಿಕೊಂಡ. ಇದು ಆತನ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.



ವಿರಾಮದ ಅವಧಿಯಲ್ಲಿ ಮುದ್ದಣ ಶಾಲೆಯ ಲೈಬ್ರರಿಯಲ್ಲಿ ಬಹಳ ಓದುತ್ತಿದ್ದ. ದಿನವೊಂದಕ್ಕೆ ನಾಲಕೈದು ಕಾದಂಬರಿಗಳನ್ನು ಮುಗಿಸುತ್ತಿದ್ದ. ಆ ಒಂದೊಂದು ಕಾದಂಬರಿಗಳನ್ನು ಓದಿದಾಗೊಮ್ಮೆ ತಾನೂ ಅಂತಹ ಕಾದಂಬರಿಗಳನ್ನು ಬರೆಯಬೇಕೆಂಬ ಆಸೆ ಹೆಮ್ಮರವಾಗುತ್ತಿತ್ತು.

ಅಪಾರ ಅದ್ಯಯನದ ಪರಿಣಾಮವಾಗಿ 1891ರಲ್ಲಿ 'ರತ್ನಾವತಿ ಕಲ್ಯಾಣ' ಮತ್ತು 'ಕುಮಾರ ವಿಜಯ' ಎಂಬೆರಡು ಹೊಸತನವುಳ್ಳ ಯಕ್ಷಗಾನ ಪ್ರಸಂಗಗಳನ್ನು ರಚಿಸಿದನು. ಅಂದು ಅದರಿಂದಾದ ಆರ್ಥಿಕ ಲಾಭ ಹೇಳಿಕೊಳ್ಳುವಂತದ್ದೇನು ಇಲ್ಲವಾದರೂ ಉತ್ತಮವಾದ ಪ್ರತಿಕ್ರಿಯೆಯಂತೂ ಬಂದಿತ್ತು. 1893ರಲ್ಲಿ ಮುದ್ದಣ ಕಮಲಾಬಾಯಿಯನ್ನು ಮದುವೆಯಾದ. ಆಕೆಯೇ ಆತನ ಪಾಲಿನ ಮನೋರಮೆ! 1894ರಲ್ಲಿ ಕಾವ್ಯಮಂಜರಿ ಎಂಬ ಮಾಸ ಪತ್ರಿಕೆಯಲ್ಲಿ ಆತನ ಹಳೆಗನ್ನಡದ 'ಅದ್ಬುತ ರಾಮಾಯಣ' ಪ್ರಕಟವಾಗತೊಡಗಿತು. ಆದರೆ ಮುದ್ದಣ ತನ್ನ ನಿಜನಾಮವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದ. 1995ರಲ್ಲಿ ವಾರ್ಧಕ ಷಟ್ಪದಿಯಲ್ಲಿ 'ಶ್ರೀರಾಮ ಪಟ್ಟಾಭೀಷೇಕ'ಎಂಬ ಗ್ರಂಥವನ್ನೂ ಬರೆದ,ಇದೂ ಕೂಡ ಕಾವ್ಯಮಂಜರಿಯಲ್ಲಿ ಪ್ರಕಟವಾಗತೊಡಗಿತು. ಇದರಲ್ಲಿಯೂ ಆತನ ನಿಜನಾಮ ಮರೆ ಮಾಚಲ್ಪಟ್ಟಿತ್ತು. ಇವೆರಡೂ ಕೃತಿಗಳಿಗೆ ಆತ ಬಳಸಿದ್ದ ಕಾವ್ಯ ನಾಮ "ಮುದ್ದಣ". ಯಾಕೆ ಹೀಗೆ ಮಾಡಿದ್ದ ಎಂದು ತಾವು ಕೇಳಬಹುದು... ಯಾಕೆಂದರೆ ಒಬ್ಬ ವ್ಯಾಯಾಮ ಮಾಸ್ತರ, ಹೆಚ್ಚು ಶಿಕ್ಷಣ ಇಲ್ಲದವನು ಇಂತಹ ಕಾವ್ಯಗಳನ್ನು ಬರೆದನೆಂದರೆ ನಂಬುವುದಿಲ್ಲ ಎಂಬ ಸಂಶಯ ಆತನಲ್ಲಿದ್ದುದೇ ಕಾರಣ. ಆದರೆ ಇವೆರಡೂ ಗ್ರಂಥಗಳು ಅಂದು ಮದರಾಸು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಾದವು!!

ಮುದ್ದಣ ವ್ಯಾಯಾಮ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಸರಕಾರಿ ಕಾಲೇಜಿನಲ್ಲಿ ಕನ್ನಡ ಅದ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ. ಸಂದರ್ಶನಕ್ಕೆ ಸಮಕಾಲೀನರಾದ ಪಂಜೆ ಮಂಗೇಶರಾಯರೂ ಬಂದಿದ್ದರು. ಅವರಿಬ್ಬರಲ್ಲಿ ಸ್ನೇಹವು ಬೆಳೆಯಿತು. ದುರಾದೃಷ್ಟವಶಾತ್ ಮುದ್ದಣ ಆಯ್ಕೆಯಾಗದೇ ಪಂಜೆಯವರಾದರು. ಆಗ ಪಂಜೆಯವರು ಮುದ್ದಣನಿಗೆ ಪತ್ರ ಬರೆಯತ್ತ  "ಭತ್ತವನ್ನು ಕುಟ್ಟುವ ಒನಕೆಯನ್ನು ಕನ್ನಡ ಕಲಿಸಲು ತಂದರು, ಚಿತ್ರವನ್ನು ಬಿಡಿಸುವ ಕುಂಚವನ್ನು ಕಿವಿ ಕೊಳೆ ತೆಗೆಯುವ ಕುಗ್ಗೆ ಕಡ್ಡಿಯನ್ನಾಗಿಸಿದರು" ಎಂದು ಮಾರ್ಮಿಕವಾಗಿ ತಿಳಿಸಿದರು.

ತದನಂತರ ಮುದ್ದಣ ಸಿಹಿ ದಾಂಪತ್ಯದ ಸಂವಾದದನ್ವಯ 'ರಾಮಾಶ್ವಮೇಧ'ವನ್ನು ಬರೆದನು. ಈ ಕೃತಿಯಲ್ಲಿ ಮುದ್ದಣ-ಮನೋರಮೆಯರ ಸಂವಾದ. ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ. ಇದು 'ಕರ್ನಾಟಕ ಕಾವ್ಯ ಕಲಾನಿಧಿ' ಯಲ್ಲಿ ಮುದ್ದಣನ ಹೆಸರಿನಲ್ಲಿ ಪ್ರಕಟವಾಯಿತು.

ಪೌರಾಣಿಕ ಹಿನ್ನೆಲೆಯ ಕೃತಿಗಳನ್ನು ಬರೆಯುವುದನ್ನು ಬಿಟ್ಟು 'ಗೋದಾವರಿ' ಎಂಬ ಸಾಮಾಜಿಕ ಕಾದಂಬರಿ ಬರೆಯಲು ಆರಂಭಿಸಿದಾಗ ಆತನಿಗೆ ಅಂದಿಗೆ ಭಯಂಕರವಾದ ಕ್ಷಯರೋಗ ಬಂದಿತು. ಈ ರೋಗ ತನ್ನ ಹೆಂಡತಿ ಮಕ್ಕಳಿಗೆ ಬರದಿರಲೆಂದು ಉದ್ದೇಶಪೂರ್ವಕವಾಗಿ ತವರು ಮನೆಗೆ ಕಳಿಸಿದ. ಗೋದಾವರಿ ಪೂರ್ಣವಾಗಲಿಲ್ಲ.

ಭಗವದ್ಗೀತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಬೇಕೆಂದಿದ್ದ.ಕನ್ನಡಕ್ಕೆ ಅಗತ್ಯವಾದ ವ್ಯಾಕರಣ ಗ್ರಂಥವೊಂದನ್ನು ರಚಿಸಬೇಕೆಂದಿದ್ದ. ಇವೆಲ್ಲ ಕೈಗೂಡದೇ ರೋಗ ತೀವ್ರವಾಗಿ 1901ರಲ್ಲಿ ಅಕಾಲ ಮೃತ್ಯುವಿಗೆ ಈಡಾದ. ಕನ್ನಡ ಸಾಹಿತ್ಯ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಮೂಲ್ಯ ಕೊಡುಗೆ ಅಂತ ಜನ ಮಾತಾಡಿಕೊಳ್ಳುತ್ತಿದ್ದ ಚೇತನವೊಂದು ಸಣ್ಣ ಮನೆಯಲ್ಲಿ ಒದ್ದಾಡಿ ಜಾಗ ಖಾಲಿ ಮಾಡಿತು.

ಬರೆಯುವುದರಲ್ಲಿ ಹೆಚ್ಚು ಉತ್ಸಾಹ ತೋರಿ, ಪಾಂಡಿತ್ಯವಿದ್ದರೂ ಎಲೆ ಮರೆಯ ಕಾಯಿಯ ಹಾಗಿದ್ದ ಜೀವ.... ಇನ್ನೂ ಹೆಚ್ಚು ಬರೆಯಬೇಕೆಂಬ ಆಸೆಯನ್ನಿಟ್ಟು ಕೊಂಡಿದ್ದ ಜೀವ.... ನಂದಳಿಕೆಯ ನಂದಾದೀಪ.... ಎಲ್ಲರ ಮುದ್ದಿನ ಮುದ್ದಣ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕದ ಯಾತ್ರೆ ಮುಗಿಸಿದ. ಆದರೆ ಆತನಿಗೆ ಏನೋ ಸಾಧಿಸಿದ ತೃಪ್ತಿ... ಇನ್ನೂ ಸಾಧಿಸಬೇಕಾಗಿತ್ತು ಎಂಬ ಅತೃಪ್ತಿ ಎರಡೂ ಇದ್ದವು.

ತೃಪ್ತಿ ಮತ್ತು ಅತೃಪ್ತಿಯ ನಡುವಿನ ತೊಳಲಾಟವೇ ಜೀವನವಲ್ಲವೇ?  ಎಷ್ಟೇ ವರ್ಷ ಬದುಕಿರಲಿ, ಎಂತಹ ಪರಿಸ್ಥಿತಿಯಲ್ಲಿಯಾದರೂ ಬದುಕಿರಲಿ ... ಛಲವೊಂದಿದ್ದರೆ ಏನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮುದ್ದಣನೇ ಮಾದರಿ.ಮುದ್ದಣ ಬದುಕಿದ್ದು ಕೇವಲ 31 ವರ್ಷವಾದರೂ ಆತ ಸಾಧಿಸಿದ್ದು ಅನನ್ಯ... ಆತನ ಸಾಧನೆಗೆ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಬಿಟ್ಟು ಹೋಗಿರುವ ಆತನ ಕೆಲವೇ ಕೆಲವು ಕನ್ನಡ ಕಸ್ತೂರಿ ಕೃತಿಗಳೇ ಸಾಕ್ಷಿ!!!

#ಮುದ್ದಣ
#ಕನ್ನಡಂ_ಕತ್ತೂರಿಯಲ್ತೇ!
#ಪದ್ಯಂ_ವದ್ಯಂ,_ಗದ್ಯಂ_ಹೃದ್ಯಂ!

Comments

Popular posts from this blog

ಭಾರತೀಯ ಸಮಾಜಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳು

ಪೀಠಿಕೆ:  ಸಮಾಜಕಾರ್ಯ ಕೇವಲ ಒಂದು ವೃತ್ತಿ ಮಾತ್ರವಾಗಿರದೇ ಅದೊಂದು ಶೈಕ್ಷಣಿಕ ಜ್ಞಾನ ಶಾಖೆಯೂ ಆಗಿದೆ. ಸಮಾಜಕಾರ್ಯ ವೃತ್ತಿಯ ಯಶಸ್ಸು, ಸಮಾಜ ಕಾರ್ಯಕರ್ತನಾದವನು ತರಬೇತಿಯ ವೇಳೆ ಎಷ್ಟರ ಮಟ್ಟಿಗೆ ಅದನ್ನು ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಅರ್ಥೈಸಿಕೊಂಡು, ಅಳವಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜಕಾರ್ಯ ಶಿಕ್ಷಣ ಮೂಲತಃ ಪಾಶ್ಚಾತ್ಯರ ಕೊಡುಗೆಯಾದ್ದರಿಂದ ಭಾರತದ ಸಂದರ್ಭದಲ್ಲಿ ಅದರ ಅನ್ವಯಿಸುವಿಕೆ ದೇಶೀಕರಣಗೊಂಡಿಲ್ಲ. ಸಮಾಜಕಾರ್ಯ ಶಿಕ್ಷಣ ಪರಿಚಿತವಾಗಿ ಎಂಟು ದಶಕಗಳೇ ಕಳೆದಿರುವ ಈ ಹೊತ್ತಿನಲ್ಲಿ ಅದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆತ್ಮಾವಲೋಕನ ಅಗತ್ಯ  ಮತ್ತು ಅನಿವಾರ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳಿಗೆ ದಾರಿ ತೊರಿಸುವ ಸಮಾಜಕಾರ್ಯ ಶಿಕ್ಷಣವೇ ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ‘ಸಮಾಜ ಕಾರ್ಯ ಶಿಕ್ಷಣದ ಪ್ರಸ್ತುತ ಸಮಸ್ಯೆಗಳ’ ಕುರಿತಾದ ಪ್ರಬಂಧ ಮಂಡನೆ, ಬೆಳಕು ಚೆಲ್ಲುವ ಒಂದು ಚಿಕ್ಕ ಪ್ರಯತ್ನವಾಗಿದೆ. ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣದ ವಿಕಾಸ ಪ್ರೊ. ಸಂಜಯ ಭಟ್ಟ ಬಹಳ ಸ್ಪಷ್ಟವಾಗಿ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣದ ವಿಕಾಸವನ್ನು ಈ ಕೆಳಗಿನ ಹಂತಗಳಲ್ಲಿ ವರ್ಗೀಕರಿಸಿದ್ದಾರೆ. 1.ಪ್ರಾರಂಭದ ಹಂತ(1936-46): ಈ ಹಂತ ಭಾರತದ ಪ್ರಪ್ರಥಮ ಸಮಾಜಕಾರ್ಯ ಶಾಲೆಯಾದ ‘ಸರ್ ದೊರಾಬ್ಜಿ ಟಾಟಾ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಸೋಸಿಯ

ಚತುರ್ದ್ವಂಸಕ ನಾಶ ಅಭಿಯಾನ-ಚೀನಾದ ಸ್ವಯಂಕೃತ ವಿಪತ್ತು!

ಈ ಅಭಿಯಾನ ಚೀನಾದ "ಮುನ್ನಡೆಯ ಮಹಾಜಿಗಿತ" (Great Leap Forward 1958-1962 ) ನೀತಿಯ ಮೊಟ್ಟ ಮೊದಲ ಕ್ರಮವಾಗಿತ್ತು. ಇದರಡಿಯಲ್ಲಿ ಗುರುತಿಸಿದ ಆ ನಾಲ್ಕು ದ್ವಂಸಕಗಳೆಂದರೆ- ಇಲಿ, ನೊಣ, ಸೊಳ್ಳೆ ಮತ್ತು ಗುಬ್ಬಚ್ಚಿ. ಗುಬ್ಬಚ್ಚಿಗಳನ್ನು ನಾಶಪಡಿಸುವ ಅಭಿಯಾನ"ಗುಬ್ಬಚ್ಚಿಗಳ ಹತ್ಯೆಯ ಅಭಿಯಾನ" ಎಂದೇ ಪ್ರಸಿದ್ಧಿಯಾಗಿತ್ತು. ಇದು ತೀವ್ರ ತೆರನಾದ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಚೀನಾದ ಭೀಕರ ಕ್ಷಾಮಕ್ಕೆ ಕಾರಣವಾಯಿತು. ಇದನ್ನರಿತ ಮಾವೋ ತ್ಸೆ ತುಂಗ್ 1960 ರಲ್ಲಿ ಈ ಅಭಿಯಾನದ ಪಟ್ಟಿಯಿಂದ ಗುಬ್ಬಿಯನ್ನು ಕೈಬಿಟ್ಟು ತಿಗಣೆಯನ್ನು ಸೇರಿಸಿದ. "ಚತುರ್ದ್ವಂಸಕ ನಾಶ ಅಭಿಯಾನ"ವನ್ನು ಮಾವೋ ತ್ಸೆ ತುಂಗ್ 1960 ರಲ್ಲಿ  ಮುನ್ನಡೆಯ ಮಹಾಜಿಗಿತ ಎಂಬ ಆರ್ಥಿಕ ನೀತಿಯ ಭಾಗವಾಗಿ ಪರಿಚಯಿಸಿದ.ಇದರ ಮೂಲ ಉದ್ದೇಶ  ರೋಗ ರುಜಿನಗಳನ್ನು ಹರಡುವ ದ್ವಂಸಕಗಳಾದ ಈ ಕೆಳಗಿನ ಜೀವಿಗಳ ನಿರ್ಮೂಲನೆಯಾಗಿತ್ತು. 1. ಸೊಳ್ಳೆ -ಮಲೇರಿಯಾ ವಾಹಕ 2. ಇಲಿ-ಪ್ಲೇಗ್ ವಾಹಕ 3. ವ್ಯಾಪಕ ನೊಣಗಳು 4. ಗುಬ್ಬಚ್ಚಿಗಳು- ಆಹಾರಧಾನ್ಯ ಮತ್ತು ಹಣ್ಣುಗಳ ದ್ವಂಸಕ. ಗುಬ್ಬಚ್ಚಿಗಳು,ರೈತರನ್ನು ಶೋಷಿಸುವ ಬಂಡವಾಳಶಾಹಿತ್ವದ ಜೀವಿಗಳೆಂದು ಚೀನಾ ಸರ್ಕಾರ ಘೋಷಿಸಿತು. ಈ ಅಭಿಯಾನದ ಪರಿಣಾಮವಾಗಿ ಲಕ್ಷಾಂತರ ಗುಬ್ಬಚ್ಚಿಗಳು ಸತ್ತವು. ಅವುಗಳಿಗೆ ಮರದ ಮೇಲೆ ಅಷ್ಟೆ ಅಲ್ಲ ಆಕಾಶದಲ್ಲಿ ಹಾರಾಡಲು ಅವಕಾಶವಿರಲಿಲ್ಲ. ಗುಬ್ಬಚ್ಚಿ ಗೂಡುಗಳನ್ನು,